ಟ್ರಕ್ ಟರ್ಮಿನಲ್ ಮಾಜಿ ಎಂಡಿ ಸಹೋದರ ಸೆರೆ

arrested
Published on

ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಹಗರಣ ಸಂಬಂಧ ಮಾಜಿ ವ್ಯವಸ್ಥಾಪಕ ನಿರ್ದೇಶಕ ಶಂಕರಪ್ಪ ಅವರ ಹಿರಿಯ ಸಹೋದರನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ರಾಮನಗರ ತಾಲೂಕಿನ ಮಾದಾಪುರ ಗ್ರಾಮದ ಎಂ.ಎಸ್. ಹೊನ್ನಪ್ಪ ಬಂಧಿತ.

ಈತನ ಖಾತೆಗೆ 20 ಲಕ್ಷ ರೂ. ಮತ್ತು ಹೊನ್ನಪ್ಪ ಅವರ ಪುತ್ರನ ಮನೆ ಖರೀದಿಗೆ 20 ಲಕ್ಷ ರೂಪಾಯಿಯನ್ನು ಗುತ್ತಿಗೆದಾರರು ಸಂದಾಯ ಮಾಡಿದ್ದರು. ಶಂಕರಪ್ಪ ಸೂಚನೆ ಮೇರೆಗೆ ಗುತ್ತಿಗೆದಾರರು ವರ್ಗಾಯಿಸಿದ್ದ ಸಂಗತಿ ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ಹೊನ್ನಪ್ಪ ಅವರನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಿಯಲ್ ಎಸ್ಟೇಟ್ ಏಜೆಂಟ್ ಹೊನ್ನಪ್ಪ, ರಾಮನಗರ ತಾಪಂ ಅಧ್ಯಕ್ಷರೂ ಆಗಿದ್ದರು. 2022ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಟ್ರಕ್ ಟರ್ಮಿನಲ್‌ಗಳ ನವೀಕರಣ ಕಾಮಗಾರಿ ನಡೆಸದೆ 45 ಕೋಟಿ ರೂ. ಅವ್ಯವಹಾರ ಆಗಿದೆ ಎಂಬ ಆರೋಪ ನಿಗಮದ ಮಾಜಿ ಅಧ್ಯಕ್ಷ ಡಿ.ಎಸ್.ವೀರಯ್ಯ ಹಾಗೂ ಮಾಜಿ ಎಂಡಿ ಶಂಕರಪ್ಪ ವಿರುದ್ಧ ಕೇಳಿ ಬಂದಿತ್ತು. ಇಬ್ಬರನ್ನು ಬಂಧಿಸಿ ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net