

ಬೆಂಗಳೂರು : ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣ ಸಂಬಂಧ ಮಾಜಿ ಜಿಎಂ ಬಿ.ಕೆ.ನಾಗರಾಜಪ್ಪ ಎಂಬುವರನ್ನು ಸಿಐಡಿ ಅಧಿಕಾರಿಗಳು ಹತ್ತು ದಿನ ಕಸ್ಟಡಿಗೆ ಪಡೆದಿದ್ದಾರೆ.
ನಿಗಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅನುದಾನ ಪಡೆದು ಕೋಟ್ಯಂತರ ರೂ.ವಂಚನೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಇದರಲ್ಲಿ ನಾಗರಾಜಪ್ಪ, ತನ್ನ ಆಪ್ತ ಸಹಾಯಕಿ, ಆಕೆಯ ಸಹೋದರ, ಮನೆ ಬಾಡಿಗೆದಾರರು, ನಿಕಟವರ್ತಿಗಳ ಹೆಸರಿನಲ್ಲಿ ನಕಲಿ ಕಂಪನಿ, ಬ್ಯಾಂಕ್ ಖಾತೆಗಳನ್ನು ತೆರೆದು ಕೋಟ್ಯಂತರ ರೂ. ವರ್ಗಾವಣೆ ಮಾಡಿ ಅವರ ಮೂಲಕ ವಿತ್ ಡ್ರಾ ಮಾಡಿಕೊಂಡು ಮೋಸ ಮಾಡಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ಸಲುವಾಗಿ ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಆದೇಶಿಸಿತ್ತು.
ಇತ್ತೀಚೆಗೆ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆರೋಪಿತರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿತ್ತು. ಇದೇ ವೇಳೆ ನಾಗರಾಜಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದೀಗ ಸಿಐಡಿ ಅಧಿಕಾರಿಗಳು ಹೆಚ್ಚಿನ ತನಿಖೆ ಸಲುವಾಗಿ ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. 10 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
2016ರ ಫೆ 29ರಂದು ‘ಭೋವಿ ಅಭಿವೃದ್ಧಿ ನಿಗಮ’ ಸ್ಥಾಪನೆಯಾಗಿದ್ದು, ಸರ್ಕಾರ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ. ಸ್ವಯಂ ಉದ್ಯೋಗಕ್ಕೆ ನೇರಸಾಲ ಯೋಜನೆ, ಉದ್ಯಮಶೀಲ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಗಂಗಾ ಕಲ್ಯಾಣ ಮತ್ತು ಭೂ ಒಡೆತನ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ.
2021-22 ಮತ್ತು 2022-23ನೇ ಸಾಲಿನ ಪ್ರಥಮ ತ್ರೈ ಮಾಸಿಕ (ಜೂನ್‌ವರೆಗೆ) ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ, ಸಿಬ್ಬಂದಿ ಹಣಕಾಸು ದುರ್ಬಳಕ್ಕೆ ಮಾಡಿಕೊಂಡಿದ್ದರು. ಆಂತರಿಕ ಲೆಕ್ಕ ಪರಿಶೋಧನೆ ವರದಿ ಪ್ರಕಾರ 56.55 ಕೋಟಿ ರೂ. ಅನುದಾನ ದುರ್ಬಳಕ್ಕೆ ದೃಢವಾಗಿತ್ತು. ಅದೇ ರೀತಿ ಶಾಸನಬದ್ಧ ಲೆಕ್ಕ ಪರಿಶೋಧಕರ ವರದಿ ಪ್ರಕಾರ 59.68 ಕೋಟಿ ರೂ. ದುರ್ಬಳಕ್ಕೆ ಆಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸಿಐಡಿ ತನಿಖೆ ವೇಳೆ 90 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸರ್ಕಾರಕ್ಕೆ ವಂಚಿಸಿರುವುದು ಬೆಳಕಿಗೆ ಬಂದಿತ್ತು. ಬೆಂಗಳೂರು ನಗರ, ಕಲಬುರಗಿ ಸೇರಿ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ.