

ಬೆಂಗಳೂರು: ಜಯನಗರ 2ನೇ ಹಂತದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಟ್ಯಾಬ್ ಕಳವು ಪ್ರಕರಣದಲ್ಲಿ ಮಾಜಿ ಗುತ್ತಿಗೆ ನೌಕರರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಹೊಸಕೆರೆಹಳ್ಳಿಯ ಶ್ರೀನಿವಾಸ್ (37) ಬಂಧಿತ. ಈತನಿಂದ 19 ಲಕ್ಷ ರೂ. ಮೌಲ್ಯದ 62 ಲಿನೊವೊ ಟ್ಯಾಬ್, ಎರಡು ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಜಯನಗರ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ವಿತರಿಸಲೆಂದು ಟ್ಯಾಬ್ ಮತ್ತು ಬ್ಯಾಟರಿಗಳನ್ನು ಸರ್ಕಾರ ಖರೀದಿ ಮಾಡಿತ್ತು. ತಾತ್ಕಾಲಿಕ ಗೋದಾಮು ರೂಪದಲ್ಲಿ ಜಯನಗರ ಆರೋಗ್ಯ ಕೇಂದ್ರದಲ್ಲಿ ಸಂಗ್ರಹಿಸಿಟ್ಟುಕೊಂಡು ಹಂತ ಹಂತವಾಗಿ ವಿತರಿಸುತ್ತಿದ್ದರು.
2019ರಲ್ಲಿ ಗುತ್ತಿಗೆ ಆಧಾರದ ಮೇಲೆ ಆಂಬುಲೆನ್ಸ್ ಚಾಲಕನಾಗಿ ಸೇರಿದ್ದ ಶ್ರೀನಿವಾಸ್, ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದ. 2022ರ ಏಪ್ರಿಲ್‌ನಲ್ಲಿ ಕೆಲಸ ಬಿಟ್ಟು ಸ್ವಂತ ಟೆಂಟೋ ಟ್ರಾವೆಲರ್ ಇಟ್ಟುಕೊಂಡು ಟ್ರಾವೆಲ್ಸ್‌ಗೆ ಬಿಟ್ಟಿದ್ದ. ಇದರ ಜೊತೆಗೆ ಜಯನಗರ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿ, ಸಿಬ್ಬಂದಿ ಪರಿಚಯವಿದ್ದ ಕಾರಣಕ್ಕೆ ಆಗಾಗ ಬಂದುಹೋಗುತ್ತಿದ್ದ. ತುರ್ತಾಗಿ ಚಾಲಕ ಬೇಕಿದ್ದಾಗ ಇಲ್ಲಿನ ಅಧಿಕಾರಿಗಳು ಶ್ರೀನಿವಾಸ್‌ನನ್ನು ಕರೆದುಕೊಂಡು ಹೋಗುತ್ತಿದ್ದರು.
ಟ್ಯಾಬ್ ಇದ್ದುದನ್ನು ಗಮನಿಸಿದ್ದ ಶ್ರೀನಿವಾಸ್, ಆಸ್ಪತ್ರೆಯ ಕೀಗಳನ್ನು ನಕಲಿ ಮಾಡಿಸಿಟ್ಟುಕೊಂಡಿದ್ದ. ಜು. 9ರ ರಾತ್ರಿ ಆಸ್ಪತ್ರೆಗೆ ಬಂದು ಟ್ಯಾಬ್ ಮತ್ತು ಎರಡು ಬ್ಯಾಟರಿ ಕಳವು ಮಾಡಿಕೊಂಡು ತನ್ನ ಮನೆಯಲ್ಲಿ ಸಂಗ್ರಹಿಸಿದ್ದ. ಮಾರನೇ ದಿನ ಆಸ್ಪತ್ರೆಗೆ ಬಂದ ವೈದ್ಯರು, ಟ್ಯಾಬ್‌ಗಳ ಸಂಖ್ಯೆಯಲ್ಲಿ ವ್ಯಾತ್ಯಾಸ ಇದ್ದುದನ್ನು ಕಂಡು ಸಿದ್ದಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‌ಸ್ಪೆಕ್ಟರ್ ಮೋಹನ್ ಡಿ. ಪಟೇಲ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿದ್ದರು.
ಜು.13ರ ಜಯನಗರದ 2ನೇ ಹಂತದ ಖಾದಿ ಸ್ಟ್ರೀಟ್ ಹೋಟೆಲ್ ಮುಂಭಾಗದಲ್ಲಿ ಟ್ಯಾಬ್ ಇಟ್ಟುಕೊಂಡು ಮಾರಾಟಕ್ಕೆ ಶ್ರೀನಿವಾಸ್, ಗಿರಾಕಿಗಳನ್ನು ಹುಡುಕುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ರೆಡ್‌ಹ್ಯಾಂಡ್ ಆಗಿ ಶ್ರೀನಿವಾಸ್‌ನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಆತನ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ 61 ಟ್ಯಾಬ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಬಿ. ದಯಾನಂದ್ ತಿಳಿಸಿದ್ದಾರೆ.