

ನವದೆಹಲಿ: ಶಿವಸೇನೆ ಮತ್ತು ಅದರ ಚಿಹ್ನೆ ‘ಬಿಲ್ಲು- ಬಾಣ’ವನ್ನು ಚುನಾವಣಾ ಆಯೋಗ ತಾತ್ಕಾಲಿಕವಾಗಿ ತಡೆ ಹಿಡಿದ ನಂತರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಮೂರು ಹೆಸರು ಮತ್ತು ಮೂರು ಚಿಹ್ನೆಗಳ ಪ್ರಸ್ತಾವವನ್ನು ಆಯೋಗಕ್ಕೆ ಸಲ್ಲಿಸಿದೆ.
‘ಶಿವಸೇನಾ ಬಾಳಾಸಾಹೇಬ್ ಠಾಕ್ರೆ’, ‘ಶಿವಸೇನಾ ಉದ್ಧವ್ ಬಾಳಾಸಾಹೇಬ್ ಠಾಕ್ರೆ’ ಹಾಗೂ ‘ಶಿವಸೇನಾ ಬಾಳಾಸಾಹೇಬ್ ಪ್ರಬೋಧನ್ಕರ್ ಠಾಕ್ರೆ’ ಎಂಬ ಹೆಸರು ಮತ್ತು ಆಯೋಗದ ಮುಕ್ತಪಟ್ಟಿಯಲ್ಲಿರುವ ‘ತ್ರಿಶೂಲ’, ‘ಉದಯಿಸುತ್ತಿರುವ ಸೂರ್ಯ’ ಮತ್ತು ‘ಟಾರ್ಚ್’ನಲ್ಲಿ ಚಿಹ್ನೆಯ ಪ್ರಸ್ತಾವವನ್ನು ಠಾಕ್ರೆ ಬಣ ಸಲ್ಲಿಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಮೂಲ ಶಿವಸೇನೆಗಾಗಿ ಹೋರಾಡುತ್ತಿರುವ ಠಾಕ್ರೆ ಮತ್ತು ಶಿಂಧೆ ಬಣಗಳ ಅರ್ಜಿ ವಿಚಾರಣೆಯನ್ನು ಆಯೋಗ ನಡೆಸುತ್ತಿದ್ದು, ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿ ಕೊಂಡಿದೆ. ಮುಂದಿನ ಆದೇಶದವರೆಗೆ ಇವೆರಡನ್ನು ಬಳಸದಂತೆ ಉಭಯ ಬಣಗಳಿಗೆ ಶನಿವಾರ ಮಧ್ಯಂತರ ಆದೇಶದಲ್ಲಿ ತಿಳಿಸಿದೆ. ಮುಂದಿನ ತಿಂಗಳ 3ರಂದು ನಡೆಯಲಿರುವ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದರೆ ಶಿಂಧೆ ಮತ್ತು ಠಾಕ್ರೆ ಬಣಗಳು ಹೊಸ ಹೆಸರು ಮತ್ತು ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಹೆಸರು ಮತ್ತು ಚಿಹ್ನೆ ಕುರಿತ ಮೂರು ಸಂಭಾವ್ಯ ಆಯ್ಕೆಯ ಪಟ್ಟಿಯನ್ನು ಸೋಮವಾರದೊಳಗೆ ಸಲ್ಲಿಸುವಂತೆ ಚುನಾವಣಾ ಆಯೋಗ ಉಭಯ ಬಣಗಳಿಗೆ ಸೂಚಿಸಿದೆ. ಈ ಮಧ್ಯೆ, ಶಿಂಧೆ ಬಣದ ಭಾನುವಾರ ಸಂಜೆ ಸಭೆ ನಡೆಸಿದೆ.
ಚುನಾವಣಾ ಆಯೋಗಕ್ಕೆ ಸುಳ್ಳು ಪ್ರಮಾಣ ಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ಉದ್ಧವ್ ಠಾಕ್ರೆ ಬಣದ ವಿರುದ್ಧ ಎಫ್ಐಆರ್ ದಾಖಲಾಗಿದೆ. ಐಪಿಸಿ 420 (ವಂಚನೆ), 465 (ಫೋರ್ಜರಿ) ಸೆಕ್ಷನ್ ಅನ್ವಯ ನಿರ್ಮಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಚುನಾವಣಾ ಆಯೋಗದ ಮುಂದೆ ತನ್ನ ಬಲವನ್ನು ಪ್ರದರ್ಶಿಸಲು ಠಾಕ್ರೆ ಬಣ ನಕಲಿ ಅಫಿಡವಿಟ್ ಸಲ್ಲಿಸಿದ್ದು, ಇದನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ ಥಾಣೆ ನಗರಪಾಲಿಕೆ ಮೇಯರ್ ನರೇಶ್ ಮಾಸ್ಕೆ ಹೇಳಿದ್ದಾರೆ.
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಿಎಂ ಎಂ.ಕೆ. ಸ್ಟಾಲಿನ್ ಅವಿರೋಧವಾಗಿ ಭಾನುವಾರ ಪುನರಾಯ್ಕೆ ಆಗಿದ್ದಾರೆ. ಹೊಸದಾಗಿ ರಚನೆಯಾದ ಪಕ್ಷದ ಸಾಮಾನ್ಯ ಮಂಡಳಿಯ ಸಭೆಯಲ್ಲಿ ಡಿಎಂಕೆ 15ನೇ ಸಾಂಸ್ಥಿಕ ಚುನಾವಣೆ ವಿಷಯ ಚರ್ಚೆಗೆ ಬಂದು, ಸ್ಟಾಲಿನ್ರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮುಂದುವರಿಸಲು ಎಲ್ಲರೂ ಸಮ್ಮತಿಸಿದರು. 2018ರಲ್ಲಿ ಎಂ. ಕರುಣಾನಿಧಿ ನಿಧನರಾದ ನಂತರ ಅವರ ಕಿರಿಯ ಮಗ ಸ್ಟಾಲಿನ್ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಹಿರಿಯ ನಾಯಕರಾದ ದೊರೈಮುರುಗನ್ ಮತ್ತು ಟಿ.ಆರ್.ಬಾಲು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಗಳಿಗೆ ಅವಿರೋಧವಾಗಿ ಎರಡನೇ ಅವಧಿಗೂ ಆಯ್ಕೆ ಆದರು.
ನಾಲ್ಕು ತಿಂಗಳ ಹಿಂದೆ ಶಿವಸೇನೆಯಲ್ಲಿ ಭಿನ್ನಮತ ಸಾರಿದ ಹಿರಿಯ ನಾಯಕ ಏಕನಾಥ್ ಶಿಂಧೆ ತಮ್ಮ ಆಪ್ತ ಶಾಸಕರನ್ನು ಕರೆದುಕೊಂಡು ಅಸ್ಸಾಂನ ರೆಸಾರ್ಟ್ಗೆ ತೆರಳಿದ್ದರು. ಇದರಿಂದ ಮಹಾರಾಷ್ಟ್ರದ ಆಘಾಡಿ (ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್) ಸರ್ಕಾರ ಪತನದ ಅಂಚಿಗೆ ಬಂದಿತು. ವಿಶ್ವಾಸಮತಕ್ಕೆ ಹೋಗದ ಸಿಎಂ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದರು. ನಂತರ ಏಕನಾಥ ಶಿಂಧೆ ಬಣ ಬಿಜೆಪಿ ಜತೆ ಸೇರಿ ಸರ್ಕಾರ ರಚನೆ ಮಾಡಿತು. ಶಿಂಧೆಗೆ ಮುಖ್ಯಮಂತ್ರಿ ಪಟ್ಟ ದಕ್ಕಿತು. ಬಿಜೆಪಿಯ ನಾಯಕ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.
ಈ ವೇಳೆ ಮೂಲ ಶಿವಸೇನೆಗಾಗಿ ಶಿಂಧೆ ಮತ್ತು ರಾಕ್ರೆ ಬಣಗಳು ಚುನಾವಣಾ ಆಯೋಗ ಮತ್ತು ಸುಪ್ರೀಂನಲ್ಲಿ ಹೋರಾಟ ಮಾಡುತ್ತಿವೆ. ಶಾಸಕಾಂಗ ಪಕ್ಷದ ಬಲಾಬಲ ಮತ್ತು ಪಕ್ಷದ ಸಂಘಟನಾತ್ಮಕ ಬೆಂಬಲದ ಬಗ್ಗೆ ಆ. 8ರೊಳಗೆ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಎರಡೂ ಬಣಗಳಿಗೆ ಸೂಚಿಸಿತ್ತು. ಠಾಕ್ರೆ ಬಣದ ಕೋರಿಕೆಯಂತೆ ಈ ಅವಧಿಯನ್ನು ಅ. 7ಕ್ಕೆ ವಿಸ್ತರಿಸಿತ್ತು. ಈ ಮಧ್ಯೆ, ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾದ ಕಾರಣ ಶಿಂಧೆ ಬಣ, ಹೆಸರು ಮತ್ತು ಚಿಹ್ನೆಯ ವಿವಾದವನ್ನು ಶೀಘ್ರ ಪರಿಹರಿಸುವಂತೆ ಕೋರಿತ್ತು. ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಶಿವಸೇನೆಯು ವಿವಿಧ ಚಿಹ್ನೆಗಳಡಿ ಸ್ಪರ್ಧಿಸುತ್ತಿತ್ತು. 1989ರಲ್ಲಿ ಅದಕ್ಕೆ ‘ಬಿಲ್ಲು-ಬಾಣ’ದ ಶಾಶ್ವತ ಚಿಹ್ನೆ ಸಿಕ್ಕಿತು.