

ಕಣ್ಣೂರು (ಕೇರಳ): ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕೇರಳದ ಕಣ್ಣೂರು ಸಮೀಪದ ತಳಿಪರಂಬದ ಪುರಾಣ ಪ್ರಸಿದ್ಧ ಶ್ರೀ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಕಣ್ಣೂರಿಗೆ ಭೇಟಿ ನೀಡಿದ್ದ ಅವರು, ಬೆಳಗ್ಗೆಯೇ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ಕೆಲ ಹೊತ್ತು ಅಲ್ಲೇ ಸಮಯ ಕಳೆದರು. ದೇವಳದ ಆಡಳಿತ ಮಂಡಳಿ ಮುಖ್ಯಸ್ಥರು, ಇತರ ಸದಸ್ಯರು, ಅಧಿಕಾರಿಗಳು ಕುಮಾರಸ್ವಾಮಿ ಅವರನ್ನು ಬರಮಾಡಿಕೊಂಡು ದೇವಳದ ಬಗ್ಗೆ ಮಾಹಿತಿ ನೀಡಿದರು.
ಪ್ರಶಾಂತ ವಾತಾವರಣದಲ್ಲಿ ಇರುವ ಈ ಆಲಯ, ನಮ್ಮ ದೇಶದ 108 ಪ್ರಾಚೀನ ಶಿವಾಲಯಗಳಲ್ಲಿ ಒಂದು. ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನೇ ಇಲ್ಲಿನ ಶ್ರೀ ರಾಜರಾಜೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದರು ಎಂಬ ಐತಿಹ್ಯವಿದೆ. ಇಂಥ ಪುಣ್ಯಸ್ಥಳದಲ್ಲಿ ಶಿವನ ದರುಶನ ಪಡೆದಿದ್ದು ನನ್ನ ಭಾಗ್ಯವೇ ಸರಿ ಎಂದು ಕುಮಾರಸ್ವಾಮಿ ಹೇಳಿದರು.
ದೇವರ ದರುಶನದ ನಂತರ ಸುವಿಶಾಲವಾದ ದೇವಳಕ್ಕೆ ಪ್ರದಕ್ಷಿಣೆ ಹಾಕಿದ ಕುಮಾರಸ್ವಾಮಿ, ದೇವಾಲಯದ ನಿರ್ಮಾಣ ಶೈಲಿ, ಧಾರ್ಮಿಕ ವಿಧಿ ವಿಧಾನಗಳು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಜತೆಗಿದ್ದರು.