

ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ದ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ (68) ಅವರು ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗುರುವಾರ ರಾತ್ರಿಯಷ್ಟೇ ಸಿನ್ಹಾ ಅವರಿಗೆ ಕೋವಿಡ್ 19 ಪಾಸಿಟಿವ್ ಬಂದಿತ್ತು. ಇದಾದ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸಿನ್ಹಾ ಅವರು 1974ನೇ ಬ್ಯಾಚ್ನ ಬಿಹಾರ ಕೇಡರ್ನ ಐಪಿಎಸ್ ಅಧಿಕಾರಿ. 2012 ಮತ್ತು 2014ರ ನಡುವೆ ಸಿಬಿಐ ನಿರ್ದೇಶಕರಾಗಿದ್ದರು. ರೈಲ್ವೆ ರಕ್ಷಣಾ ಪಡೆಯಲ್ಲೂ ಮುಖ್ಯಸ್ಥರಾಗಿದ್ದರು. ಸಿಬಿಐ ಮುಖ್ಯಸ್ಥರಾಗುವ ಮುನ್ನ ಪಟನಾ ಮತ್ತು ದೆಹಲಿಯಲ್ಲಿ ಕೇಂದ್ರೀಯ ತನಿಖಾ ದಳದಲ್ಲಿ ಉತ್ತನ ಸ್ಥಾನವನ್ನು ನಿರ್ವಹಿಸಿದ್ದರು.
ಇವರು ಬಿಹಾರದ ಪಟನಾ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ 2014ರಲ್ಲಿ ಸ್ಪರ್ಧಿಸಿ, ಸುದ್ದಿಯಾಗಿದ್ದರು. ಸಿನ್ಹಾ ಅವರು ತನಿಖಾ ಸಂಸ್ಥೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಕಲ್ಲಿದ್ದಲು ಬ್ಲಾಕ್ ಹಂಚಿಕೆಗೆ ಸಂಬಂಧಿಸಿದ ತನಿಖೆಯ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಲಾಗಿತ್ತು. ಹೀಗೆ ಸಾಕಷ್ಟು ವಿವಾದಗಳಲ್ಲಿ ಇವರು ಸುದ್ದಿಯಾಗಿದ್ದರು. (ಏಜೆನ್ಸೀಸ್)