

ಶಿವಮೊಗ್ಗ: ರಾಗಿಗುಡ್ಡದ ಆಯ್ದ ವ್ಯಕ್ತಿಗಳನ್ನೊಳಗೊಂಡ ಶಾಂತಿ ಸಮಿತಿ ಮತ್ತು ಯುವಕರಗಳನ್ನೊಳಗೊಂಡ ಯುವಪಡೆ ರಚಿಸಿ ಅವರ ವಾಟ್ಸ್‌ಆ್ಯಪ್ ಗ್ರೂಪ್ ಸೃಜಿಸಲಿದ್ದು ಅವರು ಪೊಲೀಸ್ ಇಲಾಖೆಯೊಂದಿಗೆ ಪ್ರಾಥಮಿಕ ಪ್ರತಿಸ್ಪಂದಕರಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ನಗರದ ಡಿಎಆರ್ ಸಭಾಂಗಣದಲ್ಲಿ ಶನಿವಾರ ರಾಗಿಗುಡ್ದ ಭಾಗದ ಮುಖಂಡರ ಸಭೆ ನಡೆಸಿದ ಅವರು, ಶಾಂತಿ ಸಮಿತಿ ಮತ್ತು ಯುವಪಡೆ ಸದಸ್ಯರು ನಮ್ಮ ಏರಿಯಾ ನಮ್ಮ ಜವಾಬ್ದಾರಿ ಎಂಬ ಧ್ಯೇಯದೊಂದಿಗೆ ಬೀಟ್ ಸಿಬ್ಬಂದಿ ಜತೆ ಗಸ್ತು ಮಾಡುವುದು. ತಮ್ಮ ಏರಿಯಾದಲ್ಲಿ ನಡೆಯುವ ಅಹಿತಕರ ಘಟನೆ, ಗಲಾಟೆ, ಅಕ್ರಮ ಚಟುವಟಿಕೆ ಮತ್ತು ಕಿಡಿಗೇಡಿತನದ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಕೂಡಲೇ ಬೀಟ್ ಸಿಬ್ಬಂದಿ, ಪೊಲೀಸ್ ಠಾಣೆ ಅಥವಾ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಲಿದ್ದಾರೆ ಎಂದರು.
ರಾಗಿಗುಡ್ಡದಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಮಹಾನಗರ ಪಾಲಿಕೆ ಮತ್ತು ರಾಗಿಗುಡ್ಡದ ಸಾರ್ವಜನಿಕರು ಸೇರಿ ಮುಂದಿನ ದಿನಗಳಲ್ಲಿ ಶ್ರಮದಾನ ಮಾಡಲಿದ್ದು ಅದಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಲಿದೆ. ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಕಳೆದ 10 ದಿನಗಳಲ್ಲಿ ರಾಗಿಗುಡ್ಡದ ಪ್ರಮುಖ 27 ಸ್ಥಳಗಳಲ್ಲಿ ಈಗಾಗಲೇ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಮತ್ತು ರಾಗಿಗುಡ್ಡದಲ್ಲಿ ಬೀದಿ ದೀಪಗಳನ್ನು ಅಳವಡಿಸಿಕೊಡುವಂತೆ ಸಾರ್ವಜನಿಕರು ಕೋರಿದ್ದು, ಈ ಕುರಿತಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಬೀದಿ ದೀಪಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೀಟ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಇಆರ್‌ವಿ ವಾಹನದ ಅಧಿಕಾರಿ ಸಿಬ್ಬಂದಿ ರಾತ್ರಿ ಗಸ್ತು ಮಾಡಲಿದ್ದು, ಒಂದು ವೇಳೆ ರಾತ್ರಿ 10ರನಂತರ ಯಾರೇ ಆಗಲೀ ಅನಾವಶ್ಯವಾಗಿ ಓಡಾಡುತ್ತಿರುವು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಗಿಗುಡ್ಡ ಭಾಗದ ಮಹಿಳೆಯರು ಹಾಗೂ ಯುವಕರ ಸಭೆ ಮತ್ತು ಶಾಲಾ ಕಾಲೇಜುಗಳಲ್ಲಿ ವಿದಾರ್ಥಿಗಳ ಸಭೆ ನಡೆಸುವುದು. ಜತೆಗೆ ಅಲ್ಲಿನ ಎಲ್ಲ ಸಾರ್ವಜನಿಕರನ್ನು ಒಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ಅನ್ನು ರಚಿಸಿ, ರಾಗಿಗುಡ್ಡದ ನಡೆಯುವ ಸಭೆಗಳ ಮಾಹಿತಿಯನ್ನು ಅದರಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ, ಶಿವಮೊಗ್ಗ ಉಪ ವಿಭಾಗ-ಬಿ ಡಿವೈಎಸ್ಪಿ ಎಂ.ಸುರೇಶ್, ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಸತ್ಯನಾರಾಯಣ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಧೀರರಾಜ್ ಹೊನ್ನವಿಲೆ ಉಪಸ್ಥಿತರಿದ್ದರು.