ಶಾನೆಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಹೊಸದಾಗಿ ಸಂಘ ರಚನೆ

28arsph1ep
ಬಾಣಾವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ರಾಜಪ್ಪ ಅಶೋಕ್, ಬಿ.ಆರ್.ಜಯಣ್ಣ, ಶ್ರೀನಿವಾಸ್ ಇತರರು ಭಾಗವಹಿಸಿದ್ದರು.
Published on

ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಇತ್ತೀಚೆಗೆ 47ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ಸಂಘದ ಅಧ್ಯಕ್ಷ ಶಾನೆಗೆರೆ ರಮೇಶ್ ಮಾತನಾಡಿ, ಷೇರುದಾರರು, ಅಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ ಸಹಕಾರ ಸಂಘವನ್ನು ಲಾಭದತ್ತ ಕೊಂಡೊಯ್ಯಲಾಗುತ್ತಿದೆ. ಪ್ರಸಕ್ತ ಸಭೆಯ ವೇಳೆಗೆ 2704 ಷೇರುದಾರ ಸದಸ್ಯರಿದ್ದು 1.29 ಕೋಟಿ ರೂ. ಮೂಲ ಬಂಡವಾಳವಿದೆ. ಅಲ್ಲದೆ, 12.77 ಕೋಟಿ ರೂ.ಬಂಡವಾಳವನ್ನು ದುಡಿಯುವ ಕ್ಷೇತ್ರಕ್ಕೆ ತೊಡಗಿಸಿದ್ದೇವೆ ಎಂದು ಹೇಳಿದರು.

ಸಹಕಾರ ಸಂಘದ ಪರಿಮಿತಿ ಹೆಚ್ಚಿರುವುದರಿಂದ ಶಾನೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಶಾನೆಗೆರೆ ಗ್ರಾಮದಲ್ಲಿಯೇ ರಚಿಸಲು ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ತಿಮ್ಮನಹಳ್ಳಿ, ತಿಪ್ಪಾಘಟ್ಟ, ಗೊಲ್ಲರಹಟ್ಟಿ, ಕೋಡಿಹಳ್ಳಿ, ಗಂಜಿಗೆರೆ, ಗಿರಿಯೋಜಿ ಕೊಪ್ಪಲು, ಗಂಜಿಗೆರೆಪುರ, ಹೊಸಳ್ಳಿ, ಅರೇಹಳ್ಳಿ, ಭೈರಾಪುರ, ಗರುಡನಗಿರಿ, ನಾಗಸಮುದ್ರ, ಆರ್.ಎನ್.ಕೊಪ್ಪಲು ಗ್ರಾಮಗಳು ನೂತನವಾಗಿ ಆರಂಭಿಸಲು ಉದ್ದೇಶಿಸಿರುವ ಸಹಕಾರ ಸಂಘಕ್ಕೆ ಸೇರ್ಪಡೆಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

ಸಿಇಒ ರಾಜಪ್ಪ ಮಾತನಾಡಿ, ದಾಸ್ತಾನು ಖರೀದಿ ಹಾಗೂ ಮಾರಾಟದಿಂದ 2,64,020 ರೂ. ನಿವ್ವಳ ಲಾಭ ಗಳಿಸಲಾಗಿದೆ. ಅಲ್ಲದೆ 7.71 ಕೋಟಿ ರೂ. ಬೆಳೆ ಸಾಲವನ್ನು 1,471 ರೈತರಿಗೆ ವಿತರಿಸಲಾಗಿದೆ. ಎಸ್‌ಎಚ್‌ಜಿ, ಎಂಟಿಎಲ್, ಹೈನುಗಾರಿಕೆ, ಹಾಲಿನ ಡೇರಿ ಅಭಿವೃಧ್ಧಿ ಸೇರಿ ವಿವಿಧ ಕ್ಷೇತ್ರಗಳ ಫಲಾನುಭವಿಗಳಿಗೂ ಸಾಲ ಸವಲತ್ತು ಕಲ್ಪಿಸಿದ್ದೇವೆ. ಸಂಘವು ಒಟ್ಟಾರೆ 13.67 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಂಕಿ ಅಂಶ ಸಹಿತ ಸರ್ವ ಸದಸ್ಯರ ಸಭೆಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ಕೆಂಚಪ್ಪ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಬಾಣಾವರ ಶ್ರೀನಿವಾಸ್, ಬಿ.ಆರ್.ಜಯಣ್ಣ, ಜಿಪಂ ಮಾಜಿ ಸದಸ್ಯ ಅಶೋಕ್, ಜಯಣ್ಣ, ಶಾನೆಗೆರೆ ಬಾಬು, ಗ್ರಾಪಂ ಅಧ್ಯಕ್ಷ ಮನಕತ್ತೂರು ಗಿರಿಯಪ್ಪ ಹಾಗೂ ಸಂಘದ ನಿರ್ದೇಶಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net