

ಕೋಲಾರ/ಮುಳಬಾಗಿಲು: ಮುಳಬಾಗಿಲಿನ ಸುಂಕು ಅಶ್ವತ್ಥನಾರಾಯಣಶೆಟ್ಟಿ ಬಡಾವಣೆಯ ಮನೆಯೊಂದರಲ್ಲಿ ಬುಧವಾರ ರಾತ್ರಿ ಶಿಕ್ಷಕಿ ದಿವ್ಯಶ್ರೀ (46) ಕೊಲೆ ಪ್ರಕರಣದ ಸ್ಥಳಕ್ಕೆ ಗುರುವಾರ ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ನಗರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯ ಕುತ್ತಿಗೆಗೆ ಚಾಕು ಹಾಕಲಾಗಿದೆ. ಅದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ಸಂಬಂಧ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನ ರಚನೆ ಮಾಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಆದಷ್ಟು ಬೇಗ ಆರೋಪಿಗಳನ್ನ ಪತ್ತೆ ಮಾಡಲಾಗುವುದು. ಈಗಾಗಲೆ ಒಂದಷ್ಟು ಮಾಹಿತಿ ಸಂಗ್ರಹ ಮಾಡಲಾಗಿದೆ. ಹಳೆ ದ್ವೇಷವಾ ಅಥವಾ ಸುಪಾರಿ ಅನ್ನೋದರ ಕುರಿತು ಈಗಲೆ ಹೇಳಲು ಸಾಧ್ಯವಿಲ್ಲ, ಪ್ರಕರಣ ತನಿಖೆ ಹಂತದಲ್ಲಿದೆ ಎಂದು ತಿಳಿಸಿದರು.