

ಭದ್ರಾವತಿ: ನದಿ ತೀರದಲ್ಲಿ ಅಕ್ರಮವಾಗಿ ಮರಳು ದಂಧೆ ಮಾಡುವವರ ವಿರುದ್ಧ ಕ್ರಮ ಜರುಗಿಸಲು ತಹಸೀಲ್ದಾರ್ ಅವರಿಗೆ ಸಂಪೂರ್ಣ ಅಧಿಕಾರವಿದೆ. ತಹಸೀಲ್ದಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ದಂಧೆಕೋರರ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಎಚ್.ಎಸ್.ಸುರೇಶ್ ಸೂಚಿಸಿದರು.
ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ, ಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಜತೆಗೆ ಮಾಹಿತಿ ನೀಡಿದವರನ್ನೇ ಸಾಕ್ಷಿಯಾಗಿ ಕರೆಯುತ್ತಾರೆ. ಇದರಿಂದ ಮಾಹಿತಿ ನೀಡುವ ವ್ಯಕ್ತಿಗೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಹೋರಾಟಗಾರ ತೀರ್ಥೇಶ್ ಗಮನಕ್ಕೆ ತಂದರು.
ಹೊಳೆಹೊನ್ನೂರು ಸೇರಿ ತಾಲೂಕಿನ ಕೆಲವೆಡೆ ಅಕ್ರಮವಾಗಿ ಮರಳು ಗಣಿಗಾರಿಕೆ ಈ ಹಿಂದೆಯೂ ನಡೆಯುತ್ತಿತ್ತು. ಈಗಲೂ ನಡೆಯುತ್ತಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲು ತಹಸೀಲ್ದಾರ್‌ಗೆ ವಿಶೇಷ ಅಧಿಕಾರವಿದೆ. ದಂಧೆಗೆ ಬಳಸಿದ ವಾಹನಗಳ ಜಪ್ತಿ, ಒಂದು ಲ್ಕಷ ರೂ.ವರೆಗೆ ದಂಡ ವಿಧಿಸಬಹುದು. ಇದಕ್ಕೆ ಪೊಲೀಸರೂ ಸಹಕರಿಸಬೇಕು. ಮಾಹಿತಿ ನೀಡುವ ವ್ಯಕ್ತಿಯ ಹೆಸರನ್ನು ಇಲಾಖೆ ಅಧಿಕಾರಿಗಳು ಗೌಪ್ಯವಾಗಿ ಇಡಬೇಕೇ ಹೊರತು ಬಹಿರಂಗಪಡಿಸುವ ಅಧಿಕಾರವಿಲ್ಲ ಎಂದು ಖಡಕ್ ಸೂಚನೆ ನೀಡಿದರು.
ಜನ್ನಾಪುರದ ಫಿಲ್ಟರ್ ಶೆಡ್‌ನ ಅಂತರಘಟ್ಟಮ್ಮ ದೇವಸ್ಥಾನದ ಬಳಿ ಕೆಲವರು ಗೋಮಾಳ ಜಾಗದಲ್ಲಿ ಸರ್ಕಾರದ ಅನುದಾನ ಬಳಸಿಕೊಂಡು ಅಕ್ರಮವಾಗಿ ಭವನ ನಿರ್ಮಿಸಿಕೊಂಡಿದ್ದಾರೆ. ಟ್ರಸ್ಟ್ ಮಾಡಿಕೊಳ್ಳುವ ಮೂಲಕ ಹಣ ಮಾಡಲು ಹೊರಟಿದ್ದಾರೆ. ಸ್ಥಳ ಪರಿಶೀಲಿಸುವ ಮೂಲಕ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಎಂದು ಹೋರಾಟಗಾರ ಶಶಿಕುಮಾರ್ ಗೌಡ ಹೇಳಿದರು.
ಇನ್ಸ್‌ಪೆಕ್ಟರ್ ಎಚ್.ಎಸ್.ಸುರೇಶ್ ಉತ್ತರಿಸಿ, ಲೋಕಾಯುಕ್ತ ಅಧಿಕಾರಿಗಳು ಎಲ್ಲ ವಿಷಯಗಳಿಗೂ ಸ್ಥಳ ಪರಿಶೀಲನೆ ಮಾಡುವಂತಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು. ಅಧಿಕಾರ ದುರ್ಬಳಕೆ ಆಗಿರುವುದು ಕಂಡುಬಂದರೆ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ತಹಸೀಲ್ದಾರರು 21 ದಿನದೊಳಗೆ ಉತ್ತರ ನೀಡಲಿದ್ದಾರೆ ಎಂದರು.
ಕ್ಲಿಯರೆನ್ಸ್ ಪಡೆದು ಕಾಮಗಾರಿ ಮುಂದುವರಿಸಿ: ಅಂಗನವಾಡಿ ಕಟ್ಟಡ ಕಾಮಗಾರಿ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದೆ. ಅಧಿಕಾರಿಗಳು ಸರಿಯಾಗಿ ಉತ್ತರಿಸುತ್ತಿಲ್ಲ. ಲೋಕಾಯುಕ್ತರಿಗೆ ಮನವಿ ಕೊಟ್ಟಿದ್ದರೂ ಅರ್ಜಿ ವಿಚಾರಣೆಗೆ ಬಂದಿಲ್ಲ ಎಂದು ತಾರೇಕಟ್ಟೆ ಗ್ರಾಪಂ ಸದಸ್ಯ ಸುರೇಶ್ ಗಮನಕ್ಕೆ ತಂದರು. ಸಿಡಿಪಿಒ ಅವರನ್ನು ಕರೆದು ಪ್ರಶ್ನಿಸಿದ ಲೋಕಾಯುಕ್ತರು, ಕಾಮಗಾರಿ ಅರ್ಧಕ್ಕೆ ನಿಂತಿರುವ ಬಗ್ಗೆ ಮಾಹಿತಿ ಕೇಳಿ ಅರ್ಜಿ ಹಾಕಿದರೆ ಕಾರಣ ತಿಳಿಸಲು ನಿಮಗೇನು ಸಮಸ್ಯೆ. ವಾಸ್ತವ ಏನಿದೆಯೋ ತಿಳಿಸಿ. ನೀವು ಸುಮ್ಮನಿದ್ದರೆ ಹೇಗೆ? ಸಾರ್ವಜನಿಕ ಕಾಮಗಾರಿಗಳು ಹೆಚ್ಚು ದಿನ ನಿಲ್ಲಬಾರದು. ಆದೇಶದಲ್ಲಿ ಎರಡು ವಾರಗಳ ಮಾತ್ರ ತಡೆಯಾಜ್ಞೆ ನೀಡಿದೆಯಷ್ಟೇ. ಕ್ಲಿಯರೆನ್ಸ್ ಮಾಡಿಸಿಕೊಂಡು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ತಿಳಿಸಿದರು. ಜಮೀನು ಹದ್ದುಬಸ್ತು, ಪೋಡಿ ಸಮಸ್ಯೆ, ವಾರ್ಡ್‌ಗಳಲ್ಲಿ ನಡೆಯದ ಕಾಮಗಾರಿ, ಗೊಂದಿ ನಾಲೆಗೆ ಹರಿಯುತ್ತಿರುವ ಕೊಳಚೆ ನೀರು, ಶಿಕ್ಷಣ ಇಲಾಖೆ ಸಂಬಂಧಿತ ವಿಚಾರಗಳು ಸೇರಿ ಹಿಂದಿನ 11 ಅರ್ಜಿಗಳ ಕುರಿತು ಚರ್ಚಿಸಲಾಯಿತು.