ಸ್ವಾರ್ಥ ಮರೆತು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿ

Veerashaiva Lingayat samaja
Published on

ಶಿವಮೊಗ್ಗ: ಜನರು ಹುತಾತ್ಮರ ರಕ್ತದ ಬೆಲೆಯನ್ನು ಎಲ್ಲಿವರೆಗೆ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿವರೆಗೂ ದೇಶ ಮತ್ತು ಸಮಾಜದ ಅಭಿವೃದ್ಧಿ ಅಸಾಧ್ಯ. ಪ್ರಕೃತಿ, ದೇಶದ ಮುಂದೆ ಯಾರೂ ದೊಡ್ಡವರಲ್ಲ. ಸ್ವಾರ್ಥ ಮರೆತು ವೀರಶೈವ ಲಿಂಗಾಯತ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಕುವೆಂಪುನಗರದ ವೀರಶೈವ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಡಿ ಮಹಿಳಾ ಘಟಕ, ಯುವ ಘಟಕ, ಮಾಧ್ಯಮ ವಿಭಾಗ, ಮಹಾನಗರ ಪಾಲಿಕೆ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವರಲ್ಲಿ ಉಪ ಪಂಗಡಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿರುವ ಉಪ ಪಂಗಡಗಳನ್ನು ಬೇರೆಯವರು ಹೊಡೆಯಬಹುದು. ಹಾಗಾಗಿ ಉಪಪಂಗಡಗಳು ಸಮುದ್ರದಂತೆ ಒಗ್ಗಟ್ಟಾಗಿದ್ದಾಗ ಯಾರೂ ನಮ್ಮನ್ನು ಅಲುಗಾಡಿಸಲು ಆಗಲ್ಲ. ಉಪ ಪಂಗಡಗಳಲ್ಲಿ ಗೊಂದಲ ಇದ್ದಾಗ ಬಗೆಹರಿಸುವ ನಿಟ್ಟಿನಲ್ಲಿ ಘಟಕಗಳು ಕಾರ್ಯಪ್ರವತ್ತವಾಗಬೇಕಿದೆ. ಅದು ಸಾಧ್ಯವಾದರೆ ಹಾನಗಲ್ ಕುಮಾರ ಸ್ವಾಮಿಯವರ ಕನಸು ನನಸಾಗಲಿದೆ ಎಂದರು. ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಎನ್ನುವುದು ಏನು?, ಏತಕ್ಕಾಗಿ ಇದೆ?, ಅದರ ಕಾರ್ಯವೇನು? ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ. ಶಿವಶರಣರ ಹೋರಾಟವನ್ನು ಸ್ಮರಿಸಬೇಕಿದೆ. ಇತರರನ್ನು ಸರಿ ಮಾಡುವ ಮುನ್ನ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳಬೇಕಿದೆ. ಪರಿವರ್ತನೆಯೇ ಸಮಾಜದ ಕಲ್ಪನೆ ಆಗಿದೆ ಎಂದರು. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಶಶಿಕಲಾ ಮೂರ್ತಿ ಮಾತನಾಡಿ, ಎಲ್ಲ ಘಟಕಗಳು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕಿದೆ. ಈ ಮೂಲಕ ಇಡೀ ಸಮಾಜಕ್ಕೆ ದಾರಿ ತೋರಬೇಕಿದೆ ಎಂದರು. ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಪ್ರಾಸ್ತಾವಿಕ ಮಾತನಾಡಿ, ವೀರಶೈವ ಲಿಂಗಾಯಯ ಸಮಾಜವನ್ನು ಮತ್ತಷ್ಟು ಬಲಿಷ್ಠವಾಗಿ ಸಂಘಟಿಸಲು ಮಹಾಸಭಾದ ಜಿಲ್ಲಾ ಯುವ ಘಟಕ, ಮಹಿಳಾ ಘಟಕ, ಮಹಾನಗರ ಪಾಲಿಕೆ ಘಟಕ ಹಾಗೂ ವಿಶೇಷವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ಮಾಧ್ಯಮ ವಿಭಾಗ ರಚನೆ ಮಾಡಲಾಗಿದೆ ಎಂದರು. ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಳ್ಳೆಕೆರೆ, ಮಹಾನಗರ ಪಾಲಿಕೆ ಘಟಕ ಜಿಲ್ಲಾಧ್ಯಕ್ಷ ಎಚ್.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಉಮೇಶ್, ಯುವ ಘಕಟದ ಜಿಲ್ಲಾಧ್ಯಕ್ಷ ಸಚಿನ್ ಪೂಜಾರ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಪಾಟೀಲ್, ಮಹಿಕಾ ಘಟಕದ ಜಿಲ್ಲಾಧ್ಯಕ್ಷೆ ಡಿ.ಬಿ.ವಾಗ್ದೇವಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ಆಶಾ ಆನಂದ್, ಮಾಧ್ಯಮ ವಿಭಾಗದ ಜಿಲ್ಲಾಧ್ಯಕ್ಷ ಕೆ.ಆರ್.ಸೋಮನಾಥ, ಸಂಚಾಲಕ ನವೀನ್ ಬಿಲ್ಗುಣಿ ಉಪಸ್ಥಿತರಿದ್ದರು.

ಸಮಾಜದಲ್ಲಿ ಆಸ್ತಿಗಾಗಿ ಜಗಳ ಆಗುವುದು ಸರ್ವೆ ಸಾಮಾನ್ಯ. ಸಮಾಜಕ್ಕಾಗಿ ಆಸ್ತಿ ಆಗಬೇಕಿದೆ. ಮಹಾಸಭಾ ಜಿಲ್ಲಾ ಘಟಕ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ವೀರಶೈವ ಲಿಂಗಾಯತ ಭವನ ನಿರ್ಮಾಣಕ್ಕೆ ಅನೇಕರ ತಪಸ್ಸಿದೆ. ಭವನ ದೇವರಿಲ್ಲದ ಗುಡಿಯಾಗಬಾರದು. ಸಮಾಜವನ್ನು ಸಂಘಟಿಸಲು ವೇದಿಕೆ ನಿರ್ಮಾಣವಾಗಬೇಕು. ಭವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡಿಸುವ ಕೆಲಸ ಆಗಬೇಕಿದೆ. ಘಟಕಗಳ ಜವಾಬ್ದಾರಿ ಹೆಚ್ಚಿದ್ದು, ಕ್ರಿಯಾಶೀಲತೆಯಿಂದ ಕಾರ್ಯಚಟುವಟಿಕೆ ನಡೆಸಬೇಕು. ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net