

* ಕಿರುವಾರ ಎಸ್. ಸುದರ್ಶನ್ ಕೋಲಾರ
ಲಾಭಕ್ಕಾಗಿ ನಿಸರ್ಗ ನಾಶವಲ್ಲದೆ ಏನು ಬೇಕಾದರೂ ಮಾಡುವ ಮಾನವನಿಂದ ಇತ್ತೀಚೆಗೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಕುತ್ತು ತರುವ ಕೃತ್ಯ ಹೆಚ್ಚುತ್ತಿದೆೆ. ಭೌಗೋಳಿಕ ಪ್ರದೇಶದಲ್ಲಿ ಹಸಿರೀಕರಣದ ಪ್ರಮಾಣ ಕುಸಿಯುತ್ತಿದ್ದು, ಜನ, ಜಾನುವಾರು, ಪ್ರಾಣಿ, ಪಾಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಆದರೆ, ಜಿಲ್ಲೆಯಲ್ಲಿ ಹಸಿರೀಕರಣ ಹೆಚ್ಚಿಸಲು ಕೋಲಾರದ ವಂಶೋದಯ ಆಸ್ಪತ್ರೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆ, ರೋಟರಿ ಕೋಲಾರ ನಂದಿನಿ ಹಾಗೂ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆ ಹಾಗೂ ವಿವಿಧ ಸಂಸ್ಥೆಗಳು ಮುಂದಾಗಿದ್ದು, ಕಳೆದ 4-5 ತಿಂಗಳಿಂದ ಕೆಲ ರಸ್ತೆಗಳ ಅಕ್ಕಪಕ್ಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನಾಟಿ ಮಾಡಿ ಪೋಷಣೆ ಮಾಡುತ್ತಿದ್ದಾರೆ. ಮುಂದಿನ ವರ್ಷದಲ್ಲಿ 10 ಸಾವಿರಕ್ಕೂ ಹೆಚ್ಚು ಸಸಿ ನಾಟಿ ಮಾಡುವ ಗುರಿ ಹೊಂದಲಾಗಿದೆ.
ಈಗಾಗಲೇ ನಗರ ಹಳೇ ಬಸ್ ನಿಲ್ದಾಣದಿಂದ ಬಂಗಾರಪೇಟೆ ವೃತ್ತ, ಎಸ್ಎನ್ಆರ್ ಸರ್ಕಾಲ್, ಅಂತರಗಂಗೆ ರಸ್ತೆ, ಬಸ್ ನಿಲ್ದಾಣದ ವೃತ್ತ, ಕ್ಲಾಕ್ ಟವರ್, ರೈಲ್ವೆ ನಿಲ್ದಾಣದ ಆವರಣದಲ್ಲಿ ಬಹೂಪಯೋಗಿ ಸಸಿಗಳನ್ನು ನಾಟಿ ಮಾಡಿ ಪೋಷಿಸುತ್ತಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
* ನಾಗರಿಕರು ಎಚ್ಚೆತ್ತುಕೊಳ್ಳಲಿ
ನಗರ, ಪಟ್ಟಣ, ಗ್ರಾಮೀಣ ಪ್ರದೇಶ, ಹೀಗೆ ಎಲ್ಲಿ ನೋಡಿದರೂ ಕಾಂಕ್ರಿಟ್, ಡಾಂಬರ್ ರಸ್ತೆ, ಆಕಾಶದೆತ್ತರದಲ್ಲಿ ಕಟ್ಟಡಗಳು. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗಿ, ಪ್ರಕೃತಿಯಲ್ಲಿ ಬದಲಾವಣೆ ಕಾಣಲಾಗುತ್ತಿದೆ. ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕವಾಗಿ ಕಡಿಯಲಾಗಿದೆ. ಆದರೆ ಖಾಲಿ ಜಾಗದಲ್ಲಿ ಸಸಿ ನೆಟ್ಟು ಬೆಳೆಸುವ ಗೋಜಿಗೆ ಇಲಾಖಾಧಿಕಾರಿಗಳು ಮುಂದಾಗಿಲ್ಲ ಎಂಬ ಆರೋಪವಿದೆ. ಇದು ನಿಸರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖಾಧಿಕಾರಿಗಳು ಸೇರಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಪರಿಸರ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದರೂ ನಾಗರಿಕರು ಮಾತ್ರ ಪರಿಸರ ರಕ್ಷಣೆಗೆ ಎಚ್ಚೆತ್ತುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ.
* ವಂಶೋದಯ ಕಾಳಜಿ
ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುವಲ್ಲಿ ವಂಶೋದಯ ಆಸ್ಪತ್ರೆಯೂ ಮುಂಚೂಣಿಯಲ್ಲಿದೆ. ಇದರ ಜತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕೋಲಾರ ರೋಟರಿ ನಂದಿನಿ ಕ್ಲಬ್ ಜತೆ ಕೈ ಜೋಡಿಸಿರುವ ಆಸ್ಪತ್ರೆಯ ಮುಖ್ಯಸ್ಥರು, ವೈದ್ಯರು, ಸಿಬ್ಬಂದಿ ಪರಿಸರ ರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
* ತಂಡ ರಚನೆ
ಈಗಾಗಲೇ ನಗರಾದ್ಯಂತ 1000ಕ್ಕೂ ಹೆಚ್ಚು ಸಸಿ ನಾಟಿ ಮಾಡಲಾಗಿದ್ದು, ಅದನ್ನು ಪೋಷಿಸಲು ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯಿಂದ ಪ್ರತ್ಯೇಕ ಪರಿಸರ ತಂಡ ರಚಿಸಿ ಜವಾಬ್ದಾರಿ ವಹಿಸಲಾಗಿದೆ. ಸದಸ್ಯರು ಗಿಡಗಳ ಪೋಷಣೆಗಾಗಿ ಪ್ರತಿ ದಿನ ಒಂದು ತಾಸು ಮೀಸಲಿರಿಸಿದ್ದು, ಕಳೆ ತೆಗೆಯುವುದು, ನೀರು ಒದಗಿಸುವುದು, ಟ್ರೀ ಗಾರ್ಡ್ ಅಳವಡಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.
* ಜವಾಬ್ದಾರಿ ಮರೆತ ಅಧಿಕಾರಿಗಳು
ಜಿಲ್ಲೆಯ ಶ್ರೀನಿವಾಸಪುರ, ಮಾಲೂರು, ಕೋಲಾರ, ಬಂಗಾರಪೇಟೆ, ಮಾಲೂರು, ಕೆಜಿಎ್ ನಗರಗಳಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಮರಗಳಿಗೆ ಹಾನಿ ಮಾಡಲಾಗಿದೆ. ಪುನ@ ರಸ್ತೆಯ ಅಕ್ಕಪಕ್ಕದಲ್ಲಿ ಸಸಿ ನೆಟ್ಟು ಪೋಷಣೆ ಮಾಡುವ ಗೋಜಿಗೆ ಅಯಾ ಸ್ಥಳಿಯ ಸಂಸ್ಥೆಗಳು, ಪಿಡಬ್ಲ್ಯುಡಿ ಇಲಾಖೆ, ಅರಣ್ಯ ಇಲಾಖೆ ಹೋಗಿಲ್ಲ. ಹೆಸರಿಗೆ ಪರಿಸರ ರಕ್ಷಣೆಯ ಜಪ ಮಾಡುತ್ತಾರೆ ಹೊರತು, ಪ್ರಾಯೋಗಿಕವಾಗಿ ಕೆಲಸ ಮಾಡಬೇಕು ಎಂಬ ಕಾಳಜಿ ಇಲಾಖಾಧಿಕಾರಿಗಳಿಗೆ ಇಲ್ಲವಾಗಿದೆ.
* ಟ್ಯಾಂಕರ್, ಪರಿಕರ ಕಲ್ಪಿಸಲು ಮನವಿ
ಸಂ&ಸಂಸ್ಥೆಗಳಿಂದ ಸಸಿ ನೆಟ್ಟು ಪೋಷಣೆ ಮಾಡಲಾಗುತ್ತಿದೆ. ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಪರಿಸರ ತಂಡದ ಯುವಕರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಾಟಿ ಮಾಡಿದ ಗಿಡಗಳಿಗೆ ಹಾಗೂ ಈಗಾಗಲೇ ನಾಟಿ ಮಾಡಲಾಗಿರುವ ಗಿಡಗಳಿಗೆ ನೀರು ಹರಿಸಬೇಕಿದೆ. ಇದಕ್ಕೆ ಟ್ಯಾಂಕರ್, ಕೆಲ ಪರಿಕರಗಳು ಅಗತ್ಯವಿದ್ದು, ನಗರಸಭೆ ಅಥವಾ ದಾನಿಗಳು ಕಲ್ಪಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಕೋಟ್...
ಸಂಘ ಸಂಸ್ಥೆಗಳ ಜತೆಗೆ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ತೋರಬೇಕು. ಪರಿಸರ ನಾಶದಿಂದ ಆಗುತ್ತಿರುವ ದುಷ್ಪರಿಣಾಮ ಅರಿತು ಅರಣ್ಯೀಕರಣಕ್ಕೆ ಒತ್ತು ನೀಡಬೇಕು. ಇದಕ್ಕೆ ವಂಶೋದಯ ಆಸ್ಪತ್ರೆ ಸಂಸ್ಥೆಯಿಂದ ಸದಾ ಸಹಕಾರ ನೀಡಲಾಗುವುದು.
- ಡಾ.ಅರವಿಂದ್, ಮಕ್ಕಳ ತಜ್ಞ, ಕೋಲಾರ.
ಕೋಟ್...
ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದ ಕಾರಣ ಸಸಿಗಳನ್ನು ಸಂಗ್ರಹಿಸಿ ಖಾಲಿ ಜಾಗದಲ್ಲಿ ನಾಟಿ ಮಾಡಲಾಗುತ್ತಿದೆ. ಜತೆಗೆ ಸಮುದಾಯಕ್ಕೆ ಜಾಗೃತಿ ಮೂಡಿಸಲಾಗುತ್ತಿದೆ.
- ವಿ.ಬಾಬು, ಅಧ್ಯಕ್ಷ, ರೋಟರಿ ಕೋಲಾರ ನಂದಿನಿ