ಅರಣ್ಯ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ

forest
ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಿತು. ನಾರಾಯಣ ಕನಕ ರಡ್ಡಿ, ಕೃಷ್ಣಮೂರ್ತಿ, ಉಪೇಂದ್ರ ಪ್ರವಾಸ್ ಸಿಂಗ್ ಇತರರಿದ್ದರು.
Published on

ಚಿಕ್ಕಮಗಳೂರು: ಆರಣ್ಯದಲ್ಲಿರುವ ಗಿಡ ಮರಗಳನ್ನು ನಾಶ ಮಾಡುವುದರಿಂದ ಆಹಾರ, ನೀರು ಹುಡುಕಿಕೊಂಡು ಕಾಡು ಪ್ರಾಣಗಳು ನಾಡಿನ ಕಡೆಗೆ ಬರುತ್ತವೆ. ಇದನ್ನು ತಪ್ಪಿಸಲು ಅರಣ್ಯ ಬೆಳೆಸಲು ಹೆಚ್ಚು ಒತ್ತು ನೀಡಬೇಕು ಎಂದು ಜಿಪಂ ಸಿಇಒ ಡಾ.ಬಿ.ಗೋಪಾಲಕೃಷ್ಣ ಹೇಳಿದರು.

ಅರಣ್ಯ ಇಲಾಖೆಯಿಂದ ನಗರದ ಶ್ರೀನಿವಾಸನಗರದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದಲ್ಲಿ ಶೇ. 24ರಷ್ಟು ಅರಣ್ಯವಿದೆ. ಅರಣ್ಯ ನಾಶದ ಪರಿಣಾಮ ಮಳೆ ಇಲ್ಲದೆ ಬರದ ಪರಿಸ್ಥಿತಿ ಎದುರಾಗಿದೆ. ಪ್ರಕೃತಿ ಅವಘಡಗಳು, ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ. ಇದನ್ನು ಸಾರ್ವಜನಿಕರು ಅರಿಯಬೇಕು. ಅರಣ್ಯ ರಕ್ಷಣೆ ಮತ್ತು ಕಾಡುಪ್ರಾಣಿಗಳ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಎಚ್ಚರಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಅರಣ್ಯ, ಕಾಡು ಪ್ರಾಣಿಗಳ ರಕ್ಷಣೆಗಾಗಿ ಅನೇಕ ಕಾಯ್ದೆ ಮತ್ತು ಕಾನೂನು ಜಾರಿಗೆ ತಂದಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜೀವವನ್ನು ಮುಡುಪಾಗಿಟ್ಟು ಕೆಲಸ ಮಾಡುವ ಪರಿಸ್ಥಿತಿ ಇದೆ. ಈಗಾಗಲೇ ಸಾಕಷ್ಟು ಅಧಿಕಾರಿ, ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದಾರೆ ಎಂದರು.
ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರವಾಸ್ ಸಿಂಗ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಳೆ ಏರುಪೇರು. ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದು, ಉತ್ತರಖಂಡ, ಹಿಮಾಚಲ ಪ್ರದೇಶ ಸೇರಿ ವಿವಿಧೆಡೆ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುವುದಕ್ಕೆ ಮೂಲ ಕಾರಣ ಅರಣ್ಯ ನಾಶ. ದೇಶದಲ್ಲಿ ನಿಗದಿತ ಪ್ರಮಾಣದಲ್ಲಿ ಅರಣ್ಯ ಇದಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಅರಣ್ಯ ರಕ್ಷಣೆಯನ್ನು ಯುದ್ಧೋಪಾದಿಯಲ್ಲಿ ಮಾಡಬೇಕು ಎಂದರು.
ಅರಣ್ಯ ಸಂರಕ್ಷಣೆಗಾಗಿ ಹುತಾತ್ಮರಾದ 59 ಅರಣ್ಯ ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕ ರಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net