ಬೀದಿಗಿಳಿದ ಅರಣ್ಯ ಶಾಸ್ತ್ರ ಪದವೀಧರರು

student
ಅರಣ್ಯ ಇಲಾಖೆ ಉದ್ಯೋಗದಲ್ಲಿ ನಮ್ಮನ್ನೇ ಸಂಪೂರ್ಣ ಪರಿಗಣಿಸಬೇಕೆಂದು ಆಗ್ರಹಿಸಿ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಕ್ಷಯ್‌ಕುಮಾರ್, ಅಂಕಿತ್ ದೇವರಾಯ, ಸುದೀಪ್ ಸಿರಿ ಗೌಡ, ಅಂಕಿತಾ, ವರ್ಷಾ, ಪ್ರಿಯಾಂಕಾ ಇತರರಿದ್ದರು.
Published on

ಶಿವಮೊಗ್ಗ: ವರ್ಷದ ಬಳಿಕ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಥಿಗಳು ಮತ್ತೆ ಬೀದಿಗೆ ಇಳಿದಿದ್ದಾರೆ. ಅರಣ್ಯ ಇಲಾಖೆ ನೇಮಕಾತಿಯಲ್ಲಿ ನಾವು ಪಡೆದ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ ಎಂಬುದು ಅವರ ಪ್ರಮುಖ ಬೇಡಿಕೆ. ಕಳೆದ ವರ್ಷ ಬೇಡಿಕೆ ಈಡೇರಿಸುವ ಭರವಸೆಯನ್ನು ಅರಣ್ಯ ಸಚಿವರು ನೀಡಿದ್ದರು. ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸತತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾಗಿ ಸಮಸ್ಯೆ ವಿವರಿಸುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ. ಇನ್ನೊಂದು ಕಡೆಯಿಂದ ಸರ್ಕಾರದ ಗಮನಸೆಳೆಯಲು ಪ್ರತಿಭಟನೆಯನ್ನೂ ಮುಂದುವರಿಸಿದ್ದಾರೆ.

ಮಂಗಳವಾರ ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಇರುವಕ್ಕಿ ಕೃಷಿ ಹಾಗೂ ತೋಟಗಾರಿಕೆ ವಿವಿ ಕ್ಯಾಂಪಸ್, ಶಿರಸಿ ಹಾಗೂ ಪೊನ್ನಂಪೇಟೆ ಅರಣ್ಯ ಶಾಸ್ತ್ರ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 800 ವಿದ್ಯಾರ್ಥಿಗಳು ಈಗ ಭವಿಷ್ಯದ ಆತಂಕದಿಂದ ಪ್ರತಿಭಟನೆಯ ಮಾರ್ಗ ಹಿಡಿದಿದ್ದಾರೆ.

ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ಪ್ರಾಯೋಗಿಕವಾಗಿ 80 ವಿಷಯಗಳನ್ನು ಅಭ್ಯಾಸ ಮಾಡಿದ್ದೇವೆ. ತಾಂತ್ರಿಕವಾಗಿ ನೈಪುಣ್ಯ ಪಡೆದಿದ್ದೇವೆ. ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಬೇಕು. ಎಸಿಎಫ್, ಡಿಆರ್‌ಎಫ್‌ಒ, ಡಿವೈಆರ್‌ಎಫ್‌ಒ ಆಗಬೇಕೆಂಬ ಕನಸು ಹೊತ್ತು ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ ನಮ್ಮ ಕನಸು ನನಸಾಗುವ ಲಕ್ಷಣ ಕಾಣುತ್ತಿಲ್ಲ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದರು.

ಎಲ್ಲ ಇಲಾಖೆಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿ ಪದವಿ, ಸ್ನಾತ್ತಕೋತ್ತರ ಪದವಿ ಓದಿದವರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಅರಣ್ಯ ಇಲಾಖೆಯಲ್ಲಿ ಅರಣ್ಯ ಪದವೀಧರರಿಗೆ ಶೇ.50ರಷ್ಟು ಉದ್ಯೋಗದಲ್ಲಿ ಅವಕಾಶ ನೀಡಲಾಗಿದೆ. ಉಳಿದ ಶೇ.50 ಸಾಮಾನ್ಯರಿಗೆ ಅವಕಾಶ ನೀಡಲಾಗಿದೆ. ಹಿಂದೆ ಪ್ರತಿಭಟನೆ ನಡೆಸಿದಾಗ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಉದ್ಯೋಗ ಪ್ರಮಾಣ ನೀಡಲಾಗಿತ್ತು. ಈಗ ಮತ್ತೆ ಅದನ್ನು ಶೇ.50ಕ್ಕೆ ಇಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳು ಹಾಗೂ ಪದವೀಧರ ಅಸೋಸಿಯೇಷನ್ ಅಧ್ಯಕ್ಷ ಅಕ್ಷಯ್‌ಕುಮಾರ್, ಉಪಾಧ್ಯಕ್ಷ ಸುದೀಪ್ ಸಿರಿ ಗೌಡ, ಕಾರ್ಯದರ್ಶಿ ಅಂಕಿತ್ ದೇವರಾಯ, ವಿದ್ಯಾರ್ಥಿಗಳಾದ ಪ್ರಿಯಾಂಕಾ, ವರ್ಷಾ, ಅಂಕಿತಾ, ಶ್ರೀನಿಧಿ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net