ತಂತ್ರಜ್ಞಾನ ಬಳಕೆಯಿಂದ ಅರಣ್ಯ ರಕ್ಷಣೆ ಸಾಧ್ಯ

Martyrs' Day Celebration
Published on

ಶಿವಮೊಗ್ಗ: ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಕೇವಲ ಕಾನೂನಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಸಾರ್ವಜನಿಕ ಸಹಭಾಗಿತ್ವವೂ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.

ನಗರದ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಕಚೇರಿಯ ಶ್ರೀಗಂಧ ಕೋಠಿ ಆವರಣದಲ್ಲಿ ಗುರುವಾರ ಕರ್ನಾಟಕ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಅರಣ್ಯ ರಕ್ಷಣೆಗೆ ಜನಸಾಮಾನ್ಯರ ಸಹಕಾರ ಅತಿ ಮುಖ್ಯ ಎಂದರು.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡುವ ಅಧಿಕಾರಿಗಳಿಗೆ ಜನರಿಂದ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ. ಕಳೆದ 10 ವರ್ಷದಲ್ಲಿ 20 ಅರಣ್ಯಾಧಿಕಾರಿಗಳು ಹುತಾತ್ಮರಾಗಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಇಂತಹ ಅನಾಹುತಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯಲ್ಲಿ ಸಾಕಷ್ಟು ತಂತ್ರಜ್ಞಾನದ ಉಪಯೋಗ ಆಗಬೇಕು. ಆದರೆ ಬಳಕೆ ಆಗದಿರುವ ಕಾರಣಕ್ಕೆ ಅಧಿಕಾರಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಇಲಾಖೆಯು ತನಿಖಾ ಅಧಿಕಾರಿಗಳಿಗೆ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ, ಡಿಸಿಎಫ್ ಡಾ. ಜಿ.ಆರ್.ಅಜ್ಜಯ್ಯ, ಪ್ರಸನ್ನಕೃಷ್ಣ ಪಟಗಾರ್, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

62 ಅರಣ್ಯಾಧಿಕಾರಿಗಳ ಪ್ರಾಣತ್ಯಾಗ

ಪ್ರಾಣಿಗಳ ದಾಳಿ, ಪರಿಸರ ವಿಕೋಪದಂತಹ ಅನಾಹುತಗಳಿಂದ ಕರ್ನಾಟಕದಲ್ಲಿ 1966ರಿಂದ 2025ರವರೆಗೆ ಅರಣ್ಯ ಇಲಾಖೆಯ 62 ಅಧಿಕಾರಿಗಳು ಪ್ರಾಣತ್ಯಾಗ ಮಾಡಿದ್ದಾರೆ. ಪ್ರಾಣಿ ಮತ್ತು ಮಾನವ ಸಂಘರ್ಷದಿಂದ 35 ಮಂದಿ ಸಾವಿಗೀಡಾಗಿದ್ದಾರೆ ಎಂದು ಆನೆ ಯೋಜನೆಯ ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಹೇಳಿದರು. ಕರ್ನಾಟಕದಲ್ಲಿ 6,300ಕ್ಕೂ ಹೆಚ್ಚು ಆನೆಗಳಿವೆ. ಇಡೀ ದೇಶದ ಮಾನವ ಮತ್ತು ಪ್ರಾಣಿ ಸಂಘರ್ಷದ ಪ್ರಕರಣಗಳನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಅನಾಹುತ ಕಡಿಮೆ. ಸಂಘರ್ಷ ತಪ್ಪಿಸಲು ಆನೆ ಓಡಾಡುವ ದಾರಿಯಲ್ಲಿ ಬ್ಯಾರಿಕೇಡ್, ಕಾರಿಡಾರ್ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ತಂತ್ರಜ್ಞಾನ ಹಾಗೂ ಶ್ವಾನದಳ ಸಹಾಯದಿಂದ ಆನೆಯನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net