

ಬೆಂಗಳೂರು:
ನ್ಯಾಯಾಲಯದಲ್ಲಿ ಇತ್ಯರ್ಥವಾಗಿದ್ದರೂ ತೆರವಾಗಿರದ ಅರಣ್ಯ ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೇತೃತ್ವದ ಜನಪ್ರತಿನಿಧಿಗಳ ಮತ್ತು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರತಿನಿಧಿಗಳ ನಿಯೋಗದ ಅಹವಾಲು ಆಲಿಸಿ ಮಾತನಾಡಿದರು.
ಒತ್ತುವರಿ ತೆರವುಗೊಳಿಸುವ ಕುರಿತು ಈಗಾಗಲೇ ಸ್ಪಷ್ಟವಾಗಿ ಆದೇಶ ಕೊಡಲಾಗಿದೆ. ಒತ್ತುವರಿ ಪ್ರಕರಣ ನ್ಯಾಯಾಲಯದಲ್ಲಿ ಇತ್ಯಾರ್ಥವಾಗಿದ್ದರೂ ತೆರವಾಗದೆ ಇರುವ ಬಗ್ಗೆ ನ್ಯಾಯಾಲಯ ಸಹ ಸರ್ಕಾರಕ್ಕೆ ನೋಟಿಸ್ ನೀಡುತ್ತಿದೆ. ಆದ್ದರಿಂದ ಇಂತಹ ಒತ್ತುವರಿಗಳನ್ನು ಹಾಗೂ 2015 ರ ನಂತರ ಅತಿಕ್ರಮಣವಾಗಿರುವುದನ್ನು ಮಾತ್ರ ತೆರವಿಗೆ ಸೂಚನೆ ನೀಡಲಾಗಿದೆ ಎಂದರು.
3 ಎಕರೆ ಒಳಗಿನ ಒತ್ತುವರಿ ಹಾಗೂ ಇತರೆ ಅರ್ಜಿಗಳು ವಿಲೇವಾರಿ ಆಗದೆ ಇರುವ ಒತ್ತುವರಿಗಳನ್ನು ಮುಟ್ಟಬಾರದು ಎಂದು ಸೂಚಿಸಿದ್ದೇನೆ ಎಂದರು.
ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದಲ್ಲಿ, ಫಸಲನ್ನು ಪಡೆಯಲು ಅವಕಾಶ ಮಾಡಿಕೊಡಲು, ಸದ್ಯ ಜಾಗದ ಗಡಿ ಗುರುತಿಸಿ ಈಗ ಬಂದಿರುವ ಫಸಲನ್ನ ರೈತರು ಕೊಯ್ಲು ಮಾಡುವವರೆಗೂ ಕಾದು, ನಂತರ ಒತ್ತವರಿ ತೆರವು ಮಾಡಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಯಾವುದನ್ನು ತೆರವು ಮಾಡಬೇಕು ಎಂಬ ಸ್ಪಷ್ಟ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಜನಸಾಮಾನ್ಯರಿಗೆ ತಲುಪುವಂತೆ ವ್ಯವಸ್ಥೆ ಮಾಡುತ್ತೇನೆ ಎಂದರು.
ಒತ್ತುವರಿ ತೆರವುಗೊಳಿಸುವಂತೆ ಸಚಿವರು ನೀಡಿದ ಸೂಚನೆಗಳಿಂದಾಗಿ ಮಲೆನಾಡಿಗರಲ್ಲಿ ಆತಂಕವಿದ್ದು ಸಣ್ಣ ಹಾಗೂ ಅತೀ ಸಣ್ಣ ರೈತರು ಹಾಗೂ ಮನೆಗಳನ್ನು ಕಟ್ಟಿಕೊಂಡವರೆಲ್ಲ ಭಯ ಭೀತಾರಾಗಿದ್ದಾರೆ. ಇಲಾಖೆಯ ಈ ನಿಲುವಿನಿಂದಾಗಿ ಹಳ್ಳಿಗಳಲ್ಲಿ ಸಣ್ಣ ಪುಟ್ಟ ರೈತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ. ಹಾಗಾಗಿ ನಿಮ್ಮ ಸ್ಪಷ್ಟವಾದ ನಿಲುವನ್ನು ತಿಳಿಸಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿತು. ಅಲ್ಲದೆ, ನ್ಯಾಯಾಲಯದಲ್ಲಿ ಇತ್ಯಾರ್ಥವಾಗಿರುವ ಕೃಷಿ ಭೂಮಿಯನ್ನು ಸಹ ಮುಂದಿನ ಫಸಲು ಕುಯ್ಯುವವವರೆಗೆ ತೆರವು ಮಾಡಬಾರದು ಎಂದು ವಿನಂತಿಸಿತು.
ಪಾರಂಪರಿಕ ಅರಣ್ಯ ಕಾಯ್ದೆಗೆ ತಿದ್ದುಪಡಿ ಮಾಡಲು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಿರುವುದಕ್ಕೆ ಈ ನಿಯೋಗವು ಸಚಿವರಿಗೆ ಕೃತಜ್ಞತೆ ಸಲ್ಲಿಸಿತು. ಈ ವಿಚಾರವಾಗಿ ಕೇಂದ್ರದ ಮೇಲೆ ಸರ್ಕಾರವು ಒತ್ತಡ ಹೇರಲು ನಿಯೋಗ ಕರೆದುಕೊಂಡು ಹೋಗುವಂತೆ ಸಹ ಮನವಿ ಮಾಡಿಕೊಂಡಿತು.
ನಿಯೋಗದಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ತರಿಕೆರೆ ಶಾಸಕ ಶ್ರೀನಿವಾಸ್, ಗುಂಡ್ಲು ಪೇಟೆ ಶಾಸಕ ಗಣೇಶ್‌ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಹಾಗೂ ಮಲೆನಾಡು ಜನಪರ ಒಕ್ಕೂಟದ ಅನಿಲ್ ಹೊಸಕೊಪ್ಪ, ಸುಕೇಶ್ ದಾಸನಕೋಡಿಗೆ ಇದ್ದರು.