

ಬೆಂಗಳೂರು: ಚಿನ್ನದ ಸರದಲ್ಲಿ ಹುಲಿ ಉಗುರು (ಲಾಕೆಟ್) ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಸೀಸನ್-೧೦ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೆ ಕೆಲ ಸೆಲೆಬ್ರಿಟಿಗಳಿಗೂ ಸಂಕಷ್ಟ ಎದುರಾಗಿದೆ.
ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್‌ಗೆ ನೋಟಿಸ್ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಪ್ರತ್ಯೇಕ ನಾಲ್ಕು ತಂಡಗಳು ಬುಧವಾರ ಈ ನಾಲ್ವರ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿವೆ. ಈ ವೇಳೆ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ಹುಲಿ ಉಗುರಿನಂತಿರುವ ವಸ್ತುವನ್ನು ಅರಣ್ಯಾಧಿಕಾರಿಗಳಿಗೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಜಗ್ಗೇಶ್ ಮತ್ತು ರಾಕ್‌ಲೈನ್ ವೆಂಕಟೇಶ್ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಧನಂಜ ಸ್ವಾಮಿ, ಗೌರಿ ಗದ್ದೆಯ ವಿನಯ ಗುರೂಜಿ ಆಶ್ರಮಕ್ಕೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ವೈರಲ್ ಆಗಿರುವ ಫೋಟೊಗಳಲ್ಲಿರುವ ವನ್ಯಜೀವಿ ವಸ್ತುಗಳ ಬಗ್ಗೆ ಮಾಹಿತಿ ನೀಡಿ, ತಮ್ಮಲ್ಲಿರುವ ಪೆಂಡೆಂಟ್ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಕೇಳಿದ್ದಾರೆ.
ಪೋಟೋ ವಿಡಿಯೋ ವೈರಲ್:
ನಟರಾದ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ನಟ-ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಧನಂಜ ಸ್ವಾಮಿ ಅವರು ಹುಲಿ ಉಗುರು ಧರಿಸಿರುವ ೆಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ ಇವರ ವಿರುದ್ಧ ಕ್ರಮ ಜರುಗಿಸಿ ಎಂದು ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯಾಧಿಕಾರಿಗಳು ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದು ಬುಧವಾರ ಆರೋಪಿತರ ಮನೆ ಕಚೇರಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅವಧೂತ ವಿನಯ್ ಗುರುಜೀ ಆಶ್ರಮಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ವಿಡಿಯೋ ಚಿತ್ರೀಕರಣ:
ಆರೋಪಿತರ ಮನೆಗಳಿಗೆ ಭೇಟಿ ಕೊಟ್ಟು ಅರಣ್ಯಾಧಿಕಾರಿಗಳು ಎಲ್ಲ ಕಡೆ ಪರಿಶೀಲನೆ ನಡೆಸಿದರು. ಈ ವೇಳೆ ಅರಣ್ಯ ಸಿಬ್ಬಂದಿ ಪರಿಶೀಲನೆಯ ಸಂಪೂರ್ಣ ದೃಶ್ಯವನ್ನು ಕ್ಯಾಮರಾದಲ್ಲಿ ಚಿತ್ರೀಕರಣ ಮಾಡಿಕೊಂಡರು.
ಜಗ್ಗೇಶ್ ವಿರುದ್ಧ ದೂರು:
ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಅವರು, ಹುಲಿ ಉಗುರಿನ ಲಾಕೆಟ್ ಧರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್ ವಿರುದ್ಧ ಕಾಂಗ್ರೆಸ್‌ನ ಮಾಜಿ ಎಂಎಲ್ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ.
ನಟ ಜಗ್ಗೇಶ್ ಹುಲಿ ಉಗುರು ಧರಿಸಿರುವ ಮತ್ತು ಇದು ಒರಿಜಿನಲ್ ಅಂತ ಅವರೇ ಹೇಳಿಕೊಂಡಿರುವ ವೀಡಿಯೋವನ್ನು ಹಲವಾರು ಜನ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕಳುಹಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದಿದ್ದಾರೆ. ಇದರಿಂದ ಸಂಸದ ಜಗ್ಗೇಶ್ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.