ಕಾನೂನು ಪ್ರಕಾರವೇ ಅರಣ್ಯ ಒತ್ತುವರಿ ತೆರವು

klr dcf
ಸರೀನಾ ಸಿಕ್ಕಲಿಗರ್​
Published on

ಕೋಲಾರ: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಅರಣ್ಯ ಜಮೀನನ್ನು ಕಾನೂನು ಪ್ರಕಾರ ತೆರವುಗೊಳಿಸಲಾಗುತ್ತಿದ್ದು, ಗೊಂದಲಗಳಿಗೆ ಕಿವಿಗೋಡದೆ ಒತ್ತುವರಿ ಮಾಡಿಕೊಂಡಿರುವವರು ಸ್ವಂಯಂಪ್ರೇರಿತರಾಗಿ ತೆರವು ಮಾಡಬೇಕು ಎಂದು ಡಿಸಿಎ್​ ಸರೀನಾ ಸಿಕ್ಕಲಿಗಾರ್​ ಹೇಳಿದರು.

ನಗರದ ಅರಣ್ಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಕಾಯ್ದೆ ಕಲಂ 64(ಎ) ಪ್ರಕಾರ ಈಗಾಗಲೇ ಒತ್ತುವರಿದಾರರಿಗೆ ನೋಟಿಸ್​ ನೀಡಲಾಗಿದ್ದು, ತೆರವಿಗೆ ಗಡುವು ನೀಡಲಾಗಿತ್ತು ಎಂದರು.

ಒಂದು ವರ್ಷದ ಹಿಂದೆಯೇ ನೋಟಿಸ್​ ನೀಡಲಾಗಿತ್ತು, ಆಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ದಾಖಲೆಗಳನ್ನು ಸಲ್ಲಿಸಲು ಸೂಚಿಸಲಾಯಿತು. ಕೆಲವರು ಜಂಟಿ ಸರ್ವೇಗೆ ಒತ್ತಾಯ ಮಾಡಿದರೆ, ಇನ್ನು ಕೆಲವರು ಕೋರ್ಟ್​ ಮೊರೆ ಹೋಗಿದ್ದಾರೆ. ಕೆಲ ಪ್ರಕರಣಗಳಲ್ಲಿ ಇಲಾಖೆಯ ಪರ ತೀರ್ಪುಗಳು ಬಂದಿವೆ. ಬಾಕಿ ಇರುವ ಜಮೀನುಗಳನ್ನು ಏನು ಮಾಡುತ್ತಿಲ್ಲ. ಬಾಕಿ ಪ್ರಕರಣಗಳಲ್ಲೂ ಇಲಾಖೆಯ ಪರತೀರ್ಪು ಬರುವ ವಿಶ್ವಾಸವಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಸುಮಾರು 10 ಸಾವಿರ ಎಕರೆ ಅರಣ್ಯ ಜಮೀನು ಒತ್ತುವರಿಯಾಗಿದ್ದು, ಆ ಪೈಕಿ ಈಗಾಗಲೇ 3 ಸಾವಿರ ಎಕರೆಗೂ ಅಧಿಕ ತೆರವುಗೊಳಿಸಲಾಗಿದೆ. ಹಂತಹಂತವಾಗಿ ಎಲ್ಲ ಒತ್ತುವರಿ ತೆರವುಗೊಳಿಸಿ ಅರಣ್ಯ ಜಮೀನು ಉಳಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಇದ್ದ ಏಡುಕೊಂಡಲು ಅವರು ಸಾಕಷ್ಟು ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಿದ್ದು, ಅದನ್ನು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಬಂಗಾರಪೇಟೆಯ ಕಾಮಸಮುದ್ರ ವ್ಯಾಪ್ತಿಯಲ್ಲಿ 70 ಎಕರೆ, 2 ದಿನಗಳಿಂದ ತಾಲೂಕಿನ ಅಬ್ಬಣಿ ಬಳಿಯಿರುವ 650 ಎಕರೆ ಅರಣ್ಯ ಪ್ರದೇಶದಲ್ಲಿ ಒತ್ತುವರಿಯಾಗಿದ್ದ ಸುಮಾರು 200 ಎಕರೆಯನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬಲಿಷ್ಠರು, ಬಡವರು ಕಾನೂನಿನ ಮುಂದೆ ಎಲ್ಲರೂ ಒಂದೇ. ನ್ಯಾಯಾಲಯದ ಆದೇಶದಂತೆ ಕೆಲಸ ಮಾಡುತ್ತಿದ್ದು, ಸ್ಪಷ್ಟ ಚಿತ್ರಣ ಸಿಕ್ಕಿದ ಕೂಡಲೇ ಕಾರ್ಯಾಚರಣೆ ನಡೆಸುತ್ತೇವೆ. ಅರಣ್ಯ ರಕ್ಷಣೆಯೇ ನಮ್ಮ ಕರ್ತವ್ಯವಾಗಿದ್ದು, ಅರಣ್ಯ ಅಧಿಕಾರಿಗಳನ್ನು ಹಸಿರು ಯೋಧರು ಎಂದೂ ಕರೆಯಲಾಗುತ್ತದೆ. ಗಡಿಯಲ್ಲಿ ಯೋಧರಂತೆ ನಾವು ಇಲ್ಲಿ ಅರಣ್ಯ ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ. ನಾವು ತಪ್ಪು ಮಾಡಿದ್ದೇವೆ ಎಂದರೆ, ಒತ್ತುವರಿದಾರರೂ ತಪ್ಪು ಮಾಡಿದ್ದಾರೆ ಎಂದೇ ಅರ್ಥ ಎಂದು ಹೇಳಿದರು.

ಕೆಲವು ಕಡೆ ರೈತರು ಅನ್ನೋದೇ ಇಲ್ಲ. ರಿಯಲ್​ ಎಸ್ಟೇಟ್​ ಆಗೋಗಿ 3-4 ಮಂದಿಗೆ ಮಾರಾಟವಾಗಿದೆ. ವಕೀಲರು, ಇಂಜಿನಿಯರ್​ಗಳು, ವೈದ್ಯರು, ಉದ್ಯಮಿಗಳು ಜಮೀನುಗಳನ್ನು ಖರೀದಿ ಮಾಡಿದ್ದಾರೆ. ಜಮೀನುಗಳಲ್ಲಿ ಕೆಲಸ ಮಾಡುವವರನ್ನು ಮುಂದೆ ಬಿಟ್ಟು ಅಳುವಂತೆ ಮಾಡಿಸುತ್ತಾರೆ. ಇದರಿಂದಾಗಿ ಸಮಾಜಕ್ಕೆ ಬೇರೆ ರೀತಿಯ ಸಂದೇಶ ಹೋಗುವಂತಾಗುತ್ತಿದೆ. ಸತ್ಯಾಸತ್ಯತೆ ಜನರಿಗೆ ತಿಳಿಯಬೇಕಾಗಿದೆ ಎಂದು ತಿಳಿಸಿದರು.

*ಕಂದಾಯ ಖಾತೆ ಮಾಡಿದರೆ ಪ್ರಕರಣ ದಾಖಲು

ಆಕ್ಷೇಪದ ನಂತರ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡಿ ವರದಿ ನೀಡಲಾಯಿತು. ಆದರೆ ಕಂದಾಯ ಅಧಿಕಾರಿಗಳು ಖಾತೆ, ಪೋಡಿ ಮಾಡಿಕೊಡುತ್ತಾರೆ ಎಂದರೆ ಏನರ್ಥ. ಈ ಬಗ್ಗೆಯೂ ಪ್ರಕರಣ ದಾಖಲಿಸಲಾಗುವುದು. ಅರಣ್ಯದ ಮೇಲೆ ಕಂದಾಯ ಇಲಾಖೆಯವರಿಗೆ ಹಕ್ಕು ಇರುವುದಿಲ್ಲ. ಈಗಾಗಲೇ ಸಾಕಷ್ಟು ತಪ್ಪುಗಳು ಆಗಿಹೋಗಿವೆ ಎಂದು ಡಿಸಿಎ್​ ಅಸಮಾಧಾನ ವ್ಯಕ್ತಪಡಿಸಿದರು.

* ತಡೆಯಾಜ್ಞೆ ತಂದಿದ್ದಾರೆ

ಶ್ರೀನಿವಾಸಪುರ ತಾಲೂಕಿನ ಜಿಂಗಾಲಕುಂಟೆ ಬಳಿ ಅರಣ್ಯ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ಭೂಮಿ ಗುರುತಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೇವೆ. ಆದರ ಮೇಲೆ ಮೇಲ್ಮನವಿ ಪ್ರಾಧಿಕಾರದಿಂದ ನೋಟಿಸ್​ಗಳನ್ನು ನೀಡಿದ್ದು, ಅದಕ್ಕೂ ಎದುರುದಾರರು ತಡೆಯಾಜ್ಞೆ ತಂದಿದ್ದಾರೆ ಎಂದು ಸರೀನಾ ಸಿಕ್ಕಲಿಗಾರ್​ ಹೇಳಿದರು.

* ಅಂತರಗಂಗೆಯಲ್ಲಿ ಜಿಪ್​ಲೈನ್​ strong>

ಅಂತರಗಂಗೆ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿಸುವ ಕುರಿತು ಪ್ರತಿಕ್ರಿಯಿಸಿ, ಅಂತರಗಂಗೆಯಲ್ಲಿ ಜಿಪ್​ಲೈನ್​ ಅಳವಡಿಕೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುದಾನ ಬಿಡುಗಡೆಯಾದ ಕೂಡಲೇ ಕೆಲಸ ಆರಂಭಿಸಲಾಗುವುದು. ಸಾಕಷ್ಟು ಬೆಟ್ಟಗಳು ಅರಣ್ಯ, ಕಂದಾಯ ವ್ಯಾಪ್ತಿಗೂ ಸೇರುತ್ತವೆ. ಹೀಗಾಗಿ ಸ್ಥಳ ಪರಿಶೀಲಿಸಿ, ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು. ನೀಲಗಿರಿ ನಿಮೂರ್ಲನೆಗೆ ಕೊಂಚ ಅಡಚಣೆಯಾಗಿದ್ದು ಸದ್ಯದಲ್ಲೇ ಬಗೆಹರಿಯಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net