

ಹೊಳೆಹೊನ್ನೂರು: ಒತ್ತುವರಿ ಮಾಡಿದವರ ವಿರುದ್ಧ ಅರಣ್ಯಾಧಿಕಾರಿಗಳು ಅಧಿಸೂಚನೆ ಹೊರಡಿಸಿ ನೋಟಿಸ್ ನೀಡುತ್ತಿದ್ದು, ಇದು ಒತ್ತುವರಿದಾರರ ನಿದ್ದೆಗೆಡಿಸಿದೆ.
ಒತ್ತುವರಿದಾರನ್ನು ಒಂದನೇ ಪಾರ್ಟಿಯಾಗಿಸಿ ಅರಣ್ಯ ಪ್ರದೇಶದಲ್ಲಿ ಬೆಲೆಬಾಳುವ ಮರಗಳನ್ನು ಕಟಾವು ಮಾಡಿ ಸಾಗುವಳಿ ಮಾಡಿ ಅರಣ್ಯ ನಾಶ ಮಾಡಲಾಗಿದೆ ಎಂದು ಉಲ್ಲೇಖಿಸಲಾಗುತ್ತಿದ್ದು, ನೋಟಿಸ್ ಜಾರಿಗೊಳಿಸಿದ ಮೂರು ದಿನದೊಳಗೆ ಖುದ್ದಾಗಿ ಹಾಜರಾಗಿ ಉತ್ತರ ನೀಡುವಂತೆ ತಿಳಿಸಲಾಗಿದೆ.
ಅಸಲಿಗೆ ಗ್ರಾಮೀಣದ ಯಾವ ಭಾಗದಲ್ಲೂ ಸಾಗುವನಿ, ಬೀಟೆ ಸೇರಿ ಬೆಲೆ ಬಾಳುವ ಮರಗಳ ಇರುವಿಕೆಯ ಕುರುಹು ಇಲ್ಲ. ಸಣ್ಣಪುಟ್ಟ ಕುರುಚಲು ಪ್ರದೇಶವನ್ನು ಸಮ ಮಾಡಿಕೊಂಡು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಗ್ರಾಮಾಂತರದ ಆನವೇರಿ ಸುತ್ತಮುತ್ತಲಿನ ಗುಡುಮಗಟ್ಟೆ, ಮಲ್ಲಿಗೆನಹಳ್ಳಿ, ತಡಸ, ಇಟ್ಟಿಗೆಹಳ್ಳಿ, ಅರಸನಘಟ್ಟ ಭಾಗದ 836 ಜನ ರೈತರಿಗೆ ಈಗಾಗಲೆ ಕಂದಾಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಅರಣ್ಯಇಲಾಖೆ ಹಂಚಿನಸಿದ್ದಾಪುರ, ದಾನವಾಡಿ, ಬೊಮ್ಮನಕಟ್ಟೆ, ತಡಸ, ಇಟಿಗೆಹಳ್ಳಿ, ಆನವೇರಿ ಭಾಗದಲ್ಲಿ 125 ಜನರಿಗೆ ನೋಟಿಸ್ ಜಾರಿ ಮಾಡಿದೆ.
ಒಂದೆರಡು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನುಗಳಲ್ಲೂ ತೆರವು ಕಾರ್ಯಚರಣೆ ಕಳೆದೊಂದು ವಾರದಿಂದ ನಡೆಯುತ್ತಿದೆ. ಆನವೇರಿ ಭಾಗದ ತಡಸ, ಗುಡುಮಗಟ್ಟೆಯಲ್ಲಿ ನೂರಾರು ಎಕರೆ ಒತ್ತುವರಿ ತೆರವುಗೊಳಿಸಿ ಟ್ರಂಚ್ ಹೊಡೆಯಲಾಗಿದೆ. ಇದನ್ನು ತಡೆಯಲು ರೈತರು ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ. ಅರಣ್ಯಾಧಿಕಾರಿಗಳಿಗೆ ಶಾಸಕರು, ಸಂಸದರು ಮಾತನಾಡಿ ಸಣ್ಣಪುಟ್ಟ ರೈತರ ಮೇಲೆ ಮಾನವೀಯತೆ ತೋರುವಂತೆ ಮಾಡಿದ ಮನವಿಗೂ ಯಾವುದೇ ಬೆಲೆ ಸಿಗಲಿಲ್ಲ.
ಇಟ್ಟಿಗೆಹಳ್ಳಿಯಲ್ಲಿ ತೆರವು ಕಾರ್ಯಚರಣೆಗೆ ತೆರಳಿದ ಜೆಸಿಬಿಗಳನ್ನು ಗ್ರಾಮಸ್ಥರು ಹಿಂದಕ್ಕೆ ಕಳಿಸಿದ್ದಾರೆ. ಆನವೇರಿಯ ಹಿರಿಮಾವುರದಮ್ಮ ದೇವಸ್ಥಾನದ ಜಾಗ ಅರಣ್ಯ ಪ್ರದೇಶಕ್ಕೆ ಸೇರಿದೆ ಎಂದು ದೇವರ ಕಾಡಿನಲ್ಲಿ ಕಾಲುವೆ ನಿರ್ಮಿಸಿದ್ದಾರೆ. ಸುತ್ತಮುತ್ತಲಿನ ಏಳು ಹಳ್ಳಿಗಳ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ಕಾಲುವೆ ಮುಚ್ಚುವಂತೆ ಪಟ್ಟುಹಿಡಿದಿದ್ದರು. ಗಲಾಟೆಯ ಸ್ಮೂಕ್ಷ್ಮ ಅರಿತ ಇಲಾಖೆ ಸಿಬ್ಬಂದಿ ಕಾಲುವೆ ತೆಗೆಯುವುದನ್ನು ನಿಲ್ಲಿಸಿದ್ದರು. ಟ್ರಂಚ್ ಮುಚ್ಚುವವರೆಗೆ ಜಿಸಿಬಿಯನ್ನು ಹೊರಗೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಗ್ರಾಪಂಗಳಿಗೆ ತ್ಯಾಜ್ಯ ವಿಲೇವಾರಿ ಘಟಕಗಳ ನಿರ್ಮಾಣಕ್ಕೆ ಗುಡ್ಡಗಾಡುಗಳಲ್ಲಿ ಮಂಜೂರು ಮಾಡಿದ ಭೂಮಿಗಳ ತೆರವಿಗೂ ಮುಂದಾಗಿ ಗ್ರಾಪಂಗಳಿಗೆ ನೋಟಿಸ್ ನೀಡಲಾಗಿದೆ. ಒತ್ತುವರಿ ತೆರವು ವಿರುದ್ಧ ಹೋರಾಟಕ್ಕೆ ಸಿದ್ಧವಾಗುತ್ತಿರುವ ಜನರು ಹೊಸದಾಗಿ ಗ್ರಾಮಾಂತರ ರೈತ ಹೋರಾಟ ಸಮಿತಿಗಳ ರಚನೆಗೆ ಮುಂದಾಗಿದ್ದಾರೆ. ಹೋರಾಟದ ರೂಪುರೇಷೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.