ಸಂಪಾದಕೀಯ: ಅರಣ್ಯ ಸಂರಕ್ಷಣೆ ಹೊಣೆಗಾರಿಕೆ

2-686d557e29085
Published on

ಇತ್ತೀಚಿನ ವರ್ಷಗಳಲ್ಲಿ ಅರಣ್ಯನಾಶ ದೊಡ್ಡ ಸವಾಲಾಗಿ ಕಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಿದ್ದು, ಇದರಿಂದ ಜೀವವೈವಿಧ್ಯವೂ ನಾಶವಾಗುತ್ತಿದೆ. ಕಾಡು ಸಮೃದ್ಧವಾಗಿದ್ದರೆ ಮಾತ್ರ ನಾಡು ಸುಭಿಕ್ಷವಾಗಿರಲು ಸಾಧ್ಯ ಎಂಬ ವಾಸ್ತವವನ್ನು ಮರೆತಿರುವುದರಿಂದಲೇ ಹಲವು ಅಪಸವ್ಯಗಳು ಸೃಷ್ಟಿಯಾಗಿವೆ. ವನ್ಯಜೀವಿಗಳ ಸಾವಿನ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ. ಆದರೆ, ಕಾನನದ ರಕ್ಷಣೆಗಾಗಿ ಅರಣ್ಯ ಇಲಾಖೆ ಹಳೆಯ ಉಪಾಯಗಳಿಗೇ ಸೀಮಿತವಾಗಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಅರಣ್ಯನಾಶದ ಪ್ರಮಾಣ ಹೀಗೆ ಮುಂದುವರಿದರೆ ಮುಂಬರುವ ವರ್ಷಗಳಲ್ಲಿ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ಹವಾಮಾನ ಬದಲಾವಣೆ ಹಾಗೂ ತಾಪಮಾನ ಹೆಚ್ಚಳದಿಂದ ಅನೇಕ ಅವಘಡಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಕಾನನದ ರಕ್ಷಣೆಗೆ ತಂತ್ರಜ್ಞಾನ ಅಳವಡಿಸಲು ಸರ್ಕಾರ ಮುಂದಾಗಿದ್ದು, ಇದರ ಪರಿಣಾಮಕಾರಿ ಅಳವಡಿಕೆ ಅಗತ್ಯ.

ಮಂಗಳವಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ‘ರಾಜ್ಯದಲ್ಲಿ ವನ್ಯಜೀವಿಗಳ ಕಳ್ಳಬೇಟೆ ನಡೆಸುವ, ಅರಣ್ಯ ಒತ್ತುವರಿ ಮತ್ತು ಅರಣ್ಯ ಸಂಪತ್ತು ದೋಚುವವರ ಮೇಲೆ ಸದಾಕಾಲ ಕಣ್ಗಾವಲು ಇಡುವ ಸಲುವಾಗಿ ಕೇಂದ್ರೀಕೃತ ಕಮಾಂಡ್ ಸೆಂಟರ್ ಸ್ಥಾಪಿಸುವ ಮೂಲಕ ಅರಣ್ಯ ಸಂಪತ್ತಿಗೆ ಹೈಟೆಕ್ ಭದ್ರತೆ ಕೊಡಲಾಗುವುದು’ ಎಂದಿದ್ದಾರೆ.

ರಾಜ್ಯದಲ್ಲಿ 40 ಸಾವಿರ ಚದರ ಕಿಲೋಮೀಟರ್ ಅರಣ್ಯ ಪ್ರದೇಶವಿದೆ. ಭೌತಿಕವಾಗಿ ಕಾವಲು ಕಾಯುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಅಕ್ರಮ ತಡೆಯುವುದು ಕ್ಲಿಷ್ಟಕರವಾಗಿದೆ. ಆದ್ದರಿಂದ ಕೃತಕ ಬುದ್ಧಿಮತ್ತೆ, ಡ್ರೋನ್ ಕ್ಯಾಮರಾ, ಕಾಡಿನಂಚಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಆ ಎಲ್ಲ ಕ್ಯಾಮರಾಗಳ ದೃಶ್ಯಗಳ ಆಧಾರದಲ್ಲಿ ವನ್ಯಜೀವಿ ಮತ್ತು ಕಳ್ಳಬೇಟೆಗಾರರ ಚಲನವಲನದ ಬಗ್ಗೆ ನಿಗಾ ಇಡಲು ಕೇಂದ್ರೀಕೃತ ಕಮಾಂಡ್ ಸೆಂಟರ್ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಸಚಿವ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ಕಾಡಿನಂಚಿನ ಗ್ರಾಮಗಳ ಜನರೊಂದಿಗೆ ಅರಣ್ಯಾಧಿಕಾರಿಗಳು ಸೌಹಾರ್ದಯುತ ಸಂಬಂಧ ಹೊಂದಬೇಕು. ಅರಣ್ಯ ಮತ್ತು ವನ್ಯಜೀವಿಗಳ ಮಹತ್ವ ತಿಳಿಸಿಕೊಡಬೇಕು’ ಎಂದೂ ಸೂಚಿಸಿದ್ದಾರೆ.

ಈ ಬಗೆಯ ಸುಧಾರಣಾ ಕ್ರಮಗಳು ಈಗಿನ ಅಗತ್ಯ. ಆದರೆ, ಇವುಗಳ ಅನುಷ್ಠಾನ ನಿಟ್ಟಿನಲ್ಲೂ ಕಾಳಜಿ ತೋರಬೇಕು. ಇಲ್ಲವಾದಲ್ಲಿ ಅರಣ್ಯ ಸಂರಕ್ಷಣೆಯ ಆಶಯಕ್ಕೆ ಮತ್ತೆ ಹಲವು ಅಡ್ಡಿಗಳು ಬರಬಹುದು. ಕೃತಕ ಬುದ್ಧಿಮತ್ತೆ ಬಳಕೆ, ಸಿಸಿಟಿವಿ ಕ್ಯಾಮರಾಗಳ ಬಳಕೆ ಸೇರಿದಂತೆ ತಂತ್ರಜ್ಞಾನಸ್ನೇಹಿ ಕ್ರಮಗಳು ಸೂಕ್ತವೇ. ಆದರೆ, ಕೆಲವೆಡೆ ಅರಣ್ಯ ಸಿಬ್ಬಂದಿಯೇ ಕಾಡುನಾಶದ ಪ್ರಕರಣಗಳಲ್ಲಿ ಶಾಮೀಲಾಗುತ್ತಾರೆ ಎಂಬ ಆರೋಪ ಸಾರ್ವಜನಿಕರಿಂದ ಬಲವಾಗಿ ಕೇಳಿಬಂದಿದೆ.

ಇದು ಬೇಲಿಯೇ ಎದ್ದು ಹೊಲ ಮೇಯುವಂಥ ಸ್ಥಿತಿ. ಹಾಗಾಗಿ, ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯದಕ್ಷತೆಯನ್ನು ಹೆಚ್ಚಿಸಬೇಕು, ಕಾಡಿನಂಚಿನ ಹಳ್ಳಿಗಳಲ್ಲಿ ಸಿಬ್ಬಂದಿಯ ಕಿರುಕುಳ ತಪ್ಪಿಸಿ, ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವನ್ಯಜೀವಿಗಳ ರಕ್ಷಣೆ ನಿಟ್ಟಿನಲ್ಲೂ ಕಾಳಜಿ ತೋರಬೇಕು. ಬದಲಾವಣೆ ಆಗಬೇಕಾದರೆ ಮೊದಲು ಅರಣ್ಯ ಇಲಾಖೆಯಲ್ಲಿ ಆಂತರಿಕ ಸುಧಾರಣೆ ಮತ್ತು ಸಿಬ್ಬಂದಿಯ ದಕ್ಷತೆ ಅಗತ್ಯ. ಈ ಸಮಸ್ಯೆ ಬಗೆಹರಿಸದೆ ಬರೀ ತಂತ್ರಜ್ಞಾನ ಅಳವಡಿಸಲು ಮುಂದಾದರೆ ಅದು ನಿರೀಕ್ಷಿತ ಫಲಿತಾಂಶ ನೀಡುವುದಿಲ್ಲ. ಆದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂಥ ಪೂರಕ ವಾತಾವರಣ ಸೃಷ್ಟಿಯಾಗಲಿ. ತಪು್ಪ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net