ಅರಣ್ಯ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ

MS Archana - DC RMG
Published on

ರಾಮನಗರ : ಅರಣ್ಯ ಪ್ರದೇಶದಲ್ಲಿ ದೊರೆಯುವ ಉತ್ಪನ್ನಗಳಿಗೆ ಮೌಲ್ಯವರ್ಧನೆ ಕಲ್ಪಿಸಿ ಮಾರಾಟಕ್ಕೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಕೈಹಾಕಿದ್ದು, ಇದಕ್ಕಾಗಿ ವನಧನ್ ವಿಕಾಸ ಯೋಜನೆ ಮೂಲಕ ಜಿಲ್ಲೆಯ ಕಾಡಿನಲ್ಲಿ ದೊರೆಯುವ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಲಲಿತಾ ಬಾಯಿ ಹೇಳಿದರು.

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ನೇತೃತ್ವದಲ್ಲಿ ಯೋಜನೆ ಅನುಷ್ಠಾನ ಸಂಬಂಧ ಶುಕ್ರವಾರ ನಡೆದ ಸಭೆಯಲ್ಲಿ ಈ ಮಾಹಿತಿ ನೀಡಿದರು.

ಬುಡಕಟ್ಟು ಮತ್ತು ಅರಣ್ಯವಾಸಿಗಳು ಕಾಡಿನಲ್ಲಿ ದೊರೆಯುವ ವಸ್ತುಗಳನ್ನು ಸಂಗ್ರಹಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರಾದರೂ ಅವರಿಗೆ ಸೂಕ್ತ ಮಾರುಕಟ್ಟೆ ದೊರೆಯದೆ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬುಡಕಟ್ಟು ಮತ್ತು ಅರಣ್ಯವಾಸಿಗಳ ಮಹಿಳೆಯರ ಒಟ್ಟು 300 ಮಂದಿಯನ್ನು ಒಳಗೊಂಡ ಗುಂಪು ಸಿದ್ಧಪಡಿಸಿಕೊಂಡು ಈ ಮೂಲಕ ವಸ್ತುಗಳ ಮೌಲ್ಯವರ್ಧನೆ ಮಾಡಿ ಸಂಸ್ಥೆಯ ಮೂಲಕ ಮಾರಾಟ ಮಾಡಲು ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಯೋಜನೆ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ಪ್ರತಿ ಜಿಲ್ಲೆಗೆ 15 ಲಕ್ಷ ರೂ. ಅನುದಾನ ನೀಡಲಿದ್ದು, ಇದರ ಮೂಲಕ ಯಂತ್ರೋಪಕರಣ, ಬ್ರಾೃಂಡಿಂಗ್ ಸೇರಿ ಇತರ ನೆರವು ನೀಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಒಂದು ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ ಎಂದರು. ಇದಕ್ಕಾಗಿ ಜಿಲ್ಲೆಯಿಂದ ಜೇನನ್ನು ಆಯ್ಕೆ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅರಣ್ಯ ಉತ್ಪನ್ನಗಳ ಪಟ್ಟಿ ಮಾಡಲು ಸೂಚನೆ

ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲೆಯಲ್ಲಿ ಲಭವಿರುವ ಅರಣ್ಯ ಉತ್ಪನ್ನಗಳನ್ನು ಪಟ್ಟಿ ಮಾಡಿ, ಇದರಲ್ಲಿ ಯಾವ ವಸ್ತುವಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎನ್ನುವುದನ್ನು ಅರಿತುಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಕಾಡು ಹುಣಸೆ, ಬಿದಿರು, ಮಾಕಳಿ ಬೇರು, ಬೇಲದಕಾಯಿ, ಸೀತಾಫಲ, ಜೇನು ಹೀಗೆ ಎಲ್ಲವೂ ಸಿಗುತ್ತದೆ. ಇದರಲ್ಲಿ ಯಾವುದಕ್ಕೆ ಹೆಚ್ಚು ಮನ್ನಣೆ ನೀಡಬೇಕು ಎನ್ನುವುದನ್ನು ಗುರುತಿಸಿ ಮುಂದುವರಿಯುವಂತೆ ತಿಳಿಸಿದರು.

ಮಾಕಳಿ ಬೇರು ದೊರೆಯುತ್ತದೆಯಾದರೂ ಅದು ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯ ಪ್ರಭೇದವಾಗಿದ್ದು, ಇದನ್ನು ರಕ್ಷಿಸುವ ಅಗತ್ಯವಿದೆ. ಇದನ್ನು ಅರಣ್ಯ ಉತ್ಪನ್ನ ಪಟ್ಟಿಗೆ ಸೇರಿಸಬಾರದು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net