ಕಳೆದು ಹೋದ ವ್ಯಾಲೆಟ್ ಮರಳಿಸಿದ ಭಾರತೀಯ ಯುವಕನ ಪ್ರಾಮಾಣಿಕತೆ ಕಂಡು ಭಾವುಕಳಾದ ವಿದೇಶಿ ಮಹಿಳೆ

Foreigner Woman
Published on

ನವದೆಹಲಿ: ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬಳು ರೈಲಿನಲ್ಲಿ ಕಳೆದುಕೊಂಡಿದ್ದ ತನ್ನ ಪ್ರಮುಖ ವಸ್ತುಗಳನ್ನು ಮರಳಿ ಪಡೆದಾಗ ಭಾವುಕರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಅಮೆರಿಕ ಮೂಲದ ಮಹಿಳೆ ರೈಲಿನಿಂದ ಕೆಳಗೆ ಇಳಿಯುವಾಗ ತನ್ನ ವ್ಯಾಲೆಟ್ ಅನ್ನು ಮರೆತಿದ್ದರು. ಬಳಿಕ ಚಿರಾಗ್​ ಎಂಬಾತ ಇನ್​ಸ್ಟಾಗ್ರಾಂನಲ್ಲಿ ವಿದೇಶಿ ಮಹಿಳೆಯನ್ನು ಸಂಪರ್ಕಿಸಿ, ನಿಮ್ಮ ವಸ್ತುಗಳು ನಮ್ಮ ಬಳಿ ಇವೆ ಎಂದು ಹೇಳಿ ಮತ್ತೆ ಆಕೆಗೆ ವಸ್ತುಗಳನ್ನು ತಲುಪಿಸಿದ್ದಾರೆ. ಈ ಘಟನೆ ಗುಜರಾತಿನ ಭುಜ್​ ಎಂಬಲ್ಲಿ ನಡೆದಿದೆ.

ಚಿರಾಗ್​ ಬಳಿ ಕಳೆದು ಹೋದ ವಸ್ತುಗಳನ್ನು ಪಡೆದ ವಿದೇಶಿ ಮಹಿಳೆ ಭಾವುಕರಾದರು. ಚಿರಾಗ್​ಗೆ ಧನ್ಯವಾದ ತಿಳಿಸಿದ ಮಹಿಳೆ, ಆತನಿಗೆ ಹಣವನ್ನು ನೀಡಲು ಮುಂದಾದರು. ಆದರೆ, ಚಿರಾಗ್​ ಮಾತ್ರ ಹಣ ಪಡೆಯಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು @stephandpete ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, 50 ಸಾವಿರಕ್ಕೂ ಅಧಿಕ ಲೈಕ್​ ಬಂದಿವೆ.

ನೀವು ವಾಲೆಟ್​ ಅನ್ನು ಮರಳಿ ಪಡೆದಿದ್ದು ಸಂತೋಷವಾಗಿದೆ. ಚಿರಾಗ್​ನಂತಹ ವ್ಯಕ್ತಿಯ ಮೇಲೆ ನನಗೆ ಹೆಮ್ಮೆ ಇದೆ. ನೀವು ಭಾರತದಲ್ಲಿ ಉತ್ತಮ ವಾಸ್ತವ್ಯವನ್ನು ಹೊಂದಿದ್ದೇನೆಂದು ಭಾವಿಸಿದ್ದೇನೆ. ನಿಮ್ಮ ಮೇಲೆ ತುಂಬಾ ಪ್ರೀತಿ ಇದೆ ಎಂದು ವಿಡಿಯೋಗೆ ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಚಿರಾಗ್​ನಂತಹ ವ್ಯಕ್ತಿಗಳು ಭಾರತೀಯ ಪ್ರವಾಸೋದ್ಯಮದ ನಿಜವಾದ ರಾಯಭಾರಿಯಾಗಿದ್ದಾರೆ. ಸರಿಯಾದ ಇಂಗ್ಲಿಷ್​ ಗೊತ್ತಿಲ್ಲದಿದ್ದರೂ ಮಹಿಳೆಯ ಹೆಸರನ್ನು ಸರಿಯಾಗಿ ಬರೆದು ಕಳೆದುಹೋಗಿದ್ದ ವಸ್ತುಗಳನ್ನು ಮರಳಿಸಿರುವುದು ನಿಜಕ್ಕೂ ಶ್ರೇಷ್ಠ ಸಂಗತಿ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದು, ಚಿರಾಗ್​ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net