

Amit Shah: ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶದ ವಿದೇಶಾಂಗ ನೀತಿಗೆ ಬೆನ್ನೆಲುಬು ಬಂದಿದೆ. ಭಾರತದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಸೇರಿದಂತೆ ಇತರರಿಗೆ ಹೋಲಿಸಿದರೆ ಮೋದಿಯವರ ವಿದೇಶಾಂಗ ನೀತಿ ಉತ್ತಮ, ವಿಶಿಷ್ಟವಾಗಿದೆ ಎಂದು ಗೃಹಮಂತ್ರ ಅಮಿತ್ ಶಾ ಹೇಳಿದ್ದಾರೆ.
ಎನ್ಡಿಟಿವಿ ಸಂಪಾದಕರ ಸಂದರ್ಶನದಲ್ಲಿ ಮಾತನಾಡಿರುವ ಅಮಿತ್ ಶಾ, ಇತಿಹಾಸಕಾರರು ಮೋದಿ ಅವರ ಆಡಳಿತವನ್ನು ಇತರ ಪ್ರಧಾನ ಮಂತ್ರಿಗಳೊಂದಿಗೆ ಹೋಲಿಸಿದಾಗ, ಫಲಿತಾಂಶವು ಪ್ರಧಾನಿ ಮೋದಿ ಅವರ ಪರವಾಗಿ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
16 ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆಯನ್ನು ನೆಹರು ಹೊಂದಿದ್ದಾರೆ. 11 ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಪ್ರಧಾನಿ ಮೋದಿ, ನಿರಂತರ ಅಧಿಕಾರಾವಧಿಯ ದೃಷ್ಟಿಯಿಂದ ಭಾರತದ ಎರಡನೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಕ್ಟೋಬರ್ 2001 ರಿಂದ ಮೇ 2014ರವರೆಗೆ ಅತಿ ಹೆಚ್ಚು ಕಾಲ ಗುಜರಾತ್‌ನ ಸಿಎಂ ಆಗಿದ್ದ ದಾಖಲೆಯೂ ಮೋದಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ದೇಶದ ಆರ್ಥಿಕತೆಯು 11 ನೇ ಸ್ಥಾನದಿಂದ 4 ನೇ ಸ್ಥಾನಕ್ಕೆ ಏರಿದೆ. 370ನೇ ವಿಧಿ, ರಾಮಮಂದಿರ, ತ್ರಿವಳಿ ತಲಾಖ್, ದೇಶದ ಪೌರತ್ವದ ವ್ಯಾಖ್ಯಾನ, ಭಾರತೀಯ ಪಾಸ್‌ಪೋರ್ಟ್‌ನ ಗೌರವವನ್ನು ಹೆಚ್ಚಿಸಲಾಗಿದೆ. ಇವೆಲ್ಲವನ್ನೂ ಕೇವಲ ಒಂದು ದಶಕದಲ್ಲಿ ಮಾಡಲಾಗಿದೆ ಎಂದು ಶಾ ಹೇಳಿದ್ದಾರೆ.
ಈ ಹಿಂದೆ ಭಾರತದ ವಿದೇಶಾಂಗ ನೀತಿಗೆ ಬೆನ್ನೆಲುಬಿನ ಕೊರತೆಯಿತ್ತು. ಬಹಳ ಅಧ್ಯಯನ ಮಾಡಿದ ಬಳಿಕ ಇದನ್ನು ಹೇಳುತ್ತಿದ್ದೇನೆ. ಇಂದು ಭಾರತದ ವಿದೇಶಾಂಗ ನೀತಿಗೆ ಬೆನ್ನೆಲುಬನ್ನು ಸೇರಿಸುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ. ಇತಿಹಾಸಕಾರರು ಮೋದಿಯವರ ಅಧಿಕಾರವಧಿಯನ್ನು ಇತರ ಪ್ರಧಾನ ಮಂತ್ರಿಗಳೊಂದಿಗೆ ಹೋಲಿಸಿದಾಗ, ಫಲಿತಾಂಶವು ಪ್ರಧಾನಿ ಮೋದಿ ಅವರ ಪರವಾಗಿ ಇರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ನಾನು ಮೋದಿಯವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರ ದೊಡ್ಡ ಗುಣವೆಂದರೆ, ಅವರು ಪ್ರತಿಯೊಂದು ಪಾತ್ರದಲ್ಲೂ ತಮ್ಮನ್ನು ತಾವು ಯಶಸ್ವಿಯಾಗಿ ರೂಪಿಸಿಕೊಳ್ಳಬಲ್ಲರು. ಅವರು ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಅವರ ಉತ್ತಮ ಗುಣ ಎಂದು ಹೇಳಿದ್ದಾರೆ. (ಏಜೆನ್ಸೀಸ್)