

ಶಿವಮೊಗ್ಗ: ಪಾಲಿಕೆಯಿಂದ ನಡೆಯುತ್ತಿರುವ ದಸರಾ ಉತ್ಸವದ ಬನ್ನಿ ಮುಡಿಯುವ ಉತ್ಸವದ ವೇದಿಕೆಯಲ್ಲಿ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಸಾಮಾನ್ಯ ನಾಗರಿಕರ ಒಕ್ಕೂಟದಿಂದ ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬನ್ನಿ ಮುಡಿಯುವ ಸಂದರ್ಭ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಅಂಬು ಕಡಿಯುವ ವೇದಿಕೆಯಲ್ಲಿ ರಾಜಕಾರಣಿಗಳು ಮತ್ತು ಮುಖ್ಯವಾಗಿ ಅವರ ಹಿಂಬಾಲಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಲೋಕಸಭಾ ಸದಸ್ಯರು, ಸಚಿವರು, ಶಾಸಕರು, ಹಿರಿಯ ಅಧಿಕಾರಿಗಳು ಹಾಗೂ ಪುರೋಹಿತರನ್ನು ಹೊರತುಪಡಿಸಿ ಬೇರೆ ಯಾರಿಗೂ ವೇದಿಕೆ ಏರಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ವಕೀಲರಾದ ಸುರೇಶ್ ಬಾಬು, ನಿರಂಜನ್, ಸಾಮಾನ್ಯ ನಾಗರಿಕರ ಒಕ್ಕೂಟದ ಪ್ರಮುಖರಾದ ಮೋಹನ್, ಯಶವಂತ್ ಶೆಟ್ಟಿ, ಕಾರ್ತಿಕ್, ವಿಶ್ವನಾಥ್ ಇತರರಿದ್ದರು.