ಮದ್ಯ ಅಕ್ರಮ ಮಾರಾಟ ತಡೆಗೆ ಒತ್ತಾಯ

protest (5)
ಅಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ತಡೆಗೆ ಆಗ್ರಹಿಸಿ ರಿಪ್ಪನ್‌ಪೇಟೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅರುಣ, ನಾರಾಯಣಪ್ಪ, ಪುಟ್ಟಪ್ಪ, ಶಿವು, ಪ್ರವೀಣ, ದಿವ್ಯಾ, ಹೇಮಾ, ರಾಧಾ, ಝೈತುನ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ಸಣ್ಣ ಅಂಗಡಿಗಳಲ್ಲೂ ಮದ್ಯ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಅಕ್ರಮವಾಗಿ ಮದ್ಯ ಸರಬರಾಜು ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅರಸಾಳು ಮತ್ತು ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಟಿ.ಆರ್.ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಿಂದ ಮಹಿಳಾ ಸ್ವಸಹಾಯ ಸಂಘ ಮತ್ತು ಮಹಿಳಾ ಒಕ್ಕೂಟದ ಸಹಭಾಗಿತ್ವದಲ್ಲಿ ಮೆರವಣಿಗೆ ಹೊರಟ ಪ್ರತಿಭಟನಾಕಾರರು ವಿನಾಯಕ ವೃತ್ತದವರೆಗೆ ಸಾಗಿ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು. ನಂತರ ನಾಡಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.

ಮಹಿಳಾ ಸಂಘದ ಸದಸ್ಯೆ ದಾಕ್ಷಾಯಿಣಿ ಕೋಟೆಕಾನ್ ಮಾತನಾಡಿ, ನಮ್ಮ ಊರುಗಳ ಅಂಗಡಿಗಳಲ್ಲಿ ದಿನಸಿ ಇಲ್ಲದಿದ್ದರೂ ಸಾರಾಯಿ ನಿರಂತರವಾಗಿ ದೊರೆಯುತ್ತದೆ. ಇದರಿಂದ ಯುವಕರು ಮದ್ಯವ್ಯಸನಿಗಳಾಗಿದ್ದಾರೆ. ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿದೆ. ಬಹಳಷ್ಟು ಕುಟುಂಬಗಳು ನೆಮ್ಮದಿ ಕಳೆದುಕೊಂಡಿವೆ. ಮಕ್ಕಳ ವಿದ್ಯಾಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದುಡಿದ ಹಣವೆಲ್ಲ ಕುಡಿತಕ್ಕೆ ಬಳಕೆಯಾಗುತ್ತಿದೆ. ಕೆಲವು ವ್ಯಸನಿಗಳು ಅಪಘಾತಕ್ಕೊಳಗಾಗಿದ್ದಾರೆ. ಇದಕ್ಕೆ ಹಳ್ಳಿಗಳಲ್ಲಿ ಸಾರಾಯಿ ಮಾರಾಟವೇ ಕಾರಣ ಎಂದು ದೂರಿದರು.

ಅಕ್ರಮ ಮಾರಾಟಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಅಕ್ರಮ ಮದ್ಯ ಮಾರಾಟದಲ್ಲಿ ಪರವಾನಗಿ ಹೊಂದಿದ ಮದ್ಯದಂಗಡಿಯವರೇ ಭಾಗಿಯಾಗಿದ್ದು ಹಳ್ಳಿಹಳ್ಳಿಗಳಿಗೂ ಪೂರೈಕೆ ಮಾಡುತ್ತಿದ್ದಾರೆ. ಈ ದಂಧೆಗೆ ಕೆಲವು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳ ಸಹಕಾರವಿರುವ ಕಾರಣ ಅಕ್ರಮ ಮಾರಾಟಗಾರರು ಗ್ರಾಮಸ್ಥರ ಮೇಲೆ ದರ್ಪ ಮೆರೆಯುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಕ್ರಮ ಮದ್ಯ ಮಾರಾಟ ಶಾಶ್ವತವಾಗಿ ನಿರ್ಬಂಧಿಸದಿದ್ದಲ್ಲಿ ಶಿವಮೊಗ್ಗ ಡಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಹೊಸನಗರ ಅಬಕಾರಿ ಉಪ ನಿರೀಕ್ಷಕಿ ವಾಸವಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಅಕ್ರಮ ಮದ್ಯಮಾರಾಟ ನಿರ್ಬಂಧಿಸುತ್ತೇವೆ ಎಂದು ಭರವಸೆ ನೀಡಿದರು.

ಅರುಣ, ನಾರಾಯಣಪ್ಪ, ಪುಟ್ಟಪ್ಪ, ಅವುಡೆ ಶಿವು, ಪ್ರವೀಣ ಅಡ್ಡೇರಿ, ನಾಗಪ್ಪ ಕಟ್ಟೆ, ರಮೇಶ, ಪ್ರಭಾಕರ, ಪವಿತ್ರಾ, ಪೂಜಾ, ಆರ್.ಎನ್.ಮಂಜುನಾಥ್, ದಿವ್ಯಾ, ಹೇಮಾ, ರಾಧಾ, ಝೈತುನ್, ಸಾಬೀರಾ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net