ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯ

protest
ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಚಿಕ್ಕಮಗಳೂರಿನಲ್ಲಿ ಬೈಕ್ ರ‌್ಯಾಲಿ ನಡೆಸಿ ಪ್ರತಿಭಟಿಸಿದರು.
Published on

ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಹುಳುವಲ್ಲಿ ಪಂಪ್ ಸಮೀಪ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಅಜಾದ್ ವೃತ್ತದತನಕ ಬೈಕ್ ರ‌್ಯಾಲಿನ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎರಡನೇ ಹಂತದ ಕಾಮಗಾರಿಗೆ ನಾಲೆ ನಿರ್ಮಿಸಲು ರೈತರಿಂದ ಜಮೀನು ವಶಪಡಿಸಿಕೊಳ್ಳಲಾಗಿದೆ. ಆದರೆ ಇದುವರೆಗೂ ಪರಿಹಾರ ನೀಡಿಲ್ಲ. ಇದರಿಂದಾಗಿ ರೈತರು ಕಂಗಲಾಗಿದ್ದಾರೆ. ಸರ್ಕಾರ ಕೂಡಲೇ ಪರಿಹಾರದ ಹಣ ಬಿಡುಗಡೆಗೊಳಿಸಬೇಕು ಎಂದು ಸಂಘದ ಜಿಲ್ಲಾ ಅಧ್ಯಕ್ಷ ಗುರುಶಾಂತಪ್ಪ ಒತ್ತಾಯಿಸಿದರು.
ಆರಂಭದಲ್ಲಿ ಸಣ್ಣನೀರಾವರಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡಿತ್ತು ಬಳಿಕ ಕಾವೇರಿ ನೀರಾವರಿ ನಿಗಮಕ್ಕೆ ವಹಿಸಲಾಗಿತ್ತು. ಮೊದಲ ಹಂತದಲ್ಲಿ ಜಾಕ್‌ವೆಲ್, ಇಂಟರ್‌ಲಾಕ್, ರೈಸಿಂಗ್‌ಮನ್ ಪೈಪ್ ಅಳವಡಿಸಿ ಪಂಪ್ ಹೌಸ್ ನಿರ್ಮಾಣವಾಗಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಇದು ಅಧಿಕಾರಿಗಳ ಅಸಡ್ಡೆ ಮತ್ತು ದಿವ್ಯ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮಳಲೂರು ಏತಾನೀರಾವರಿ ಕಾಮಗಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದುವರೆಗೂ ಪೂರ್ಣಗೊಂಡಿಲ್ಲ. ಬಿಗ್ಗನಹಳ್ಳಿ, ಮಳಲೂರು, ಕಬ್ಬಿಹಳ್ಳಿ, ಬಿಕ್ಕೆಮನೆ ಸೇರಿ ಅನೇಕ ಗ್ರಾಮಗಳ ಕೃಷಿ ಪ್ರದೇಶಕ್ಕೆ ನೀರೊದಗಿಸುವ ಯೋಜನೆ ಇದಾಗಿದೆ. ಆರಂಭದಲ್ಲಿ 2.58 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾದ ಯೋಜನೆ ಜನಪ್ರತಿನಿಧಿಗಳು ಬದಲಾದಂತೆ ಯೋಜನಾ ವೆಚ್ಚ 7.5 ತಲುಪಿದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪದಾಧಿಕಾರಿ ಕೆ.ಕೆ.ಕೃಷ್ಣೇಗೌಡ ಮಾತನಾಡಿ, ರೈತರು ಬೆಳೆದಿರುವ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲ, ರೈತರ ನೆರವಿಗೆ ಬರಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. 30 ವರ್ಷದ ಯೋಜನೆ ನೆನೆಗುದಿಗೆ ಬಿದ್ದಿರುವುದು ಜನಪ್ರತಿನಿಧಿಗಳ ಅಸಹಾಯಕತೆ ತೋರಿಸುತ್ತಿದೆ. ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಕ್ಷೇತ್ರದ ಶಾಸಕರು ವಹಿಸಿಕೊಳ್ಳಬೇಕು. ಕಾಮಗಾರಿ ಮತ್ತಷ್ಟು ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಶಾಸಕರ ನಿವಾಸದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು, ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು, ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ತ್ರೀಪೇಸ್ ವಿದ್ಯುತ್ ಒದಗಿಸಬೇಕು. ಎನ್‌ಡಿಆರ್‌ಎಫ್ ಮಾನದಂಡ ಬದಲಾಯಿಸಿ ಪರಿಹಾರ ಹೆಚ್ಚಿಸಬೇಕು ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ವಿವಿಧ ಹಕ್ಕೋತ್ತಾಯ ಮಂಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಪದಾಧಿಕಾರಿಗಳಾದ ಎಂ.ಬಿ.ಚಂದ್ರಶೇಖರ್, ಕೆ.ಟಿ.ಆನಂದ್, ಪುಟ್ಟಸ್ವಾಮಿ ಗೌಡ, ಎಚ್.ಎಸ್.ಲೋಕೇಶ್, ಮಂಜುನಾಥಗೌಡ, ಮಲ್ಲುಂಡಪ್ಪ, ಗೌರಮ್ಮ, ಶಿವಾನಂದ್, ಪರ್ವತೇಗೌಡ ಮತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net