

ಕೋಲಾರ: ಕೆರೆ, ಕಾಲುವೆ, ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಬೇಕು, ನಕಲಿ ದಾಖಲೆ ಸೃಷ್ಟಿಸಿ ಬಲಾಢ್ಯರಿಗೆ ಪರಭಾರೆ ಮಾಡಿಕೊಟ್ಟಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರಿ ಆಸ್ತಿಗಳನ್ನು ಉಳಿಸಬೇಕಾದ ಕಂದಾಯ ಸರ್ವೇ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕು ಕಚೇರಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳ, ದಲ್ಲಾಳಿಗಳ ತವರುಮನೆಯಾಗಿ ಮಾರ್ಪಾಡಾಗಿವೆ. ಜನಸಾಮಾನ್ಯರ ಕೆಲಸ ಆಗಬೇಕಾದರೆ ತಿಂಗಳಾನುಗಟ್ಟಲೆ ತಾಲೂಕು, ಎಸಿ, ಡಿಸಿ ಕಚೇರಿ ಅಲೆದರೂ ಕೆಲಸ ಆಗುವುದಿಲ್ಲ ಎಂದು ದೂರಿದರು.
ಕೆರೆ, ರಾಜಕಾಲುವೆ ಒತ್ತುವರಿ ಆಗಿರುವುದರಿಂದ ಮಳೆ ಆದಾಗ ನೀರು ಸರಾಗವಾಗಿ ಕಾಲುವೆಗಳ ಮುಖಾಂತರ ಕೆರೆಗೆ ಹರಿಯಲು ಅವಕಾಶ ಇಲ್ಲದ ಕಾರಣ ರೈತರ ತೋಟಗಳಿಗೆ ನುಗ್ಗಿ ಬೆಳೆ ನಾಶವಾಗುತ್ತಿದೆ. ಪಟ್ಟಣ, ನಗರ ಪ್ರದೇಶದಲ್ಲಿ ಮನೆಗಳಿಗೆ ನುಗ್ಗುತ್ತಿದೆ. ಇದರ ಬಗ್ಗೆ ಅಧಿಕಾರಿ, ಸಿಬ್ಬಂದಿಗೆ ಮಾಹಿತಿಯಿದ್ದರು ತೆರವುಗೊಳಿಸಲು ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರಿ ಕಚೇರಿಗಳು ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಚಿನ್ನದ ಮೊಟ್ಟೆಯಿಡುವ ಇಲಾಖೆಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದರು.
ಮಾಲೂರು, ಕೋಲಾರ ಹಾಗೂ ಮುಳಬಾಗಿಲು ತಾಲೂಕುಗಳಲ್ಲಿ ಸರ್ಕಾರಿ ಕೆರೆಗಳನ್ನೇ ಮಾರಾಟ ಮಾಡಿ ಲೇಔಟ್ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಅಧಿಕಾರಗಳು ನೇರವಾಗಿ ಕುಮ್ಮಕ್ಕು ನೀಡಿದ್ದಾರೆ. ತಾಲೂಕು ಕಂದಾಯ ಅಽಕಾರಿಗಳನ್ನು ಸಭೆ ಕರೆದು, ಭೂಗಳ್ಳರಿಂದ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ವಿಶೇಷ ಸೂಚನೆ ನೀಡುವ ಜತೆಗೆ 2010ರಿಂದ ಇದುವರೆಗೂ ಮಂಜೂರಾರಗಿರುವ ಭೂಮಿಯ ಸಾಗುವಳಿ ಕಡತಗಳನ್ನು ತನಿಖೆ ಮಾಡಬೇಕು. ಒತ್ತುವರಿ ಜಾಗ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಮರಗಲ್ ಶ್ರೀನಿವಾಸ್, ಪಾರುಕ್‌ಪಾಷಾ, ಬಂಗಾರಿ ಮಂಜು, ವಿಜಯ್‌ಪಾಲ್, ಭಾಸ್ಕರ್, ಮುನಿಯಪ್ಪ, ಯಲ್ಲಣ್ಣ, ಹರೀಶ್, ಮುದುವಾಡಿ ಚಂದ್ರಪ್ಪ, ಗಿರೀಶ್ ಶೈಲಜ, ವೆಂಕಟಮ್ಮ, ಮಂಗಸAದ್ರ ತಿಮ್ಮಣ್ಣ, ವೆಂಕಟೇಶಪ್ಪ, ರತ್ನಮ್ಮ, ಗೌರಮ್ಮ ಇದ್ದರು.