

ಶಿವಮೊಗ್ಗ: ಕಲಿಕೆ ಎಂಬುದು ವ್ರತದಂತೆ ನಿರಂತರವಾದುದು. ಕಲಿತು ಕಲೆಯುವ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಚಲನಚಿತ್ರ ನಟ ಸುಚೇಂದ್ರಪ್ರಸಾದ್ ತಿಳಿಸಿದರು.
ಡಿವಿಎಸ್ ಪದವಿಪೂರ್ವ (ಸ್ವತಂತ್ರ)ಕಾಲೇಜಿನಿಂದ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ವೇದಿಕೆ, ರೋವರ್ಸ್ ರೇಂಜರ್ಸ್ ಘಟಕಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಿಕೆ ಎಂಬುದು ನಿತ್ಯ ಉದಯಿಸುವ ಸೂರ್ಯನಂತಿರಬೇಕು. ಓದು ಸ್ವಯಂ ಆಸಕ್ತಿಯಿಂದ ಇರಬೇಕೇ ಹೊರತು ಒತ್ತಾಯಪೂರ್ವಕವಾಗಿ ಅಲ್ಲ. ವಿವೇಕದಿಂದ ಆನಂದ ಸಿಗುತ್ತದೆ. ಕಣ್ತೆರೆದು ನೋಡಿದಾಗ ಮಾತ್ರ ದೃಷ್ಟಿ ಗೋಚರವಾಗುತ್ತದೆ. ಸ್ವಯಂ ಪ್ರಜ್ಞೆ ಬೇಕು. ಸ್ವೀಕಾರ ಇಲ್ಲದಿರುವುದು ಆಕಾರ ಕಳೆದುಕೊಳ್ಳುತ್ತದೆ. ಓದಿದ್ದನ್ನು ಮನನ ಮಾಡಿಕೊಂಡು ಎದೆಯಾಳಕ್ಕಿಳಿಸಿ ಅನುಷ್ಠಾನ ಮಾಡಬೇಕು ಎಂದರು.
ಮಾಗಿದವರು ಬಾಗುತ್ತ ಹೋಗುತ್ತಾರೆ. ಬಾಗಿದವರು ಶ್ರೇಷ್ಠತೆ ಪಡೆಯುತ್ತಾರೆ. ವಿಕೃತಿಯನ್ನು ತೊರೆಯುವುದೇ ಸಂಸ್ಕೃತಿ. ನಮ್ಮ ದಾರಿ ನಿಚ್ಚಳವಾಗಬೇಕು ಎಂದರೆ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕು. ಅಧರ್ಮದ ನಡೆ ನಮ್ಮ ದಾರಿಯನ್ನು ಸುಗಮಗೊಳಿಸುವುದಿಲ್ಲ. ತಲ್ಲಣ, ತಾಕಲಾಟಗಳ ನಡುವೆ ನಮ್ಮತನ ಕಳೆದುಕೊಳ್ಳಬಾರದು ಎಂದು ಹೇಳಿದರು.
ಸಮಾಜ ಘಾತುಕ ಶಕ್ತಿಗಳು ಬೆಳೆಯಲು ನಮ್ಮ ಮೌನವು ಸಹಕಾರವಾಗಬಹುದು. ನಮಗೆ ಸ್ಪಷ್ಟತೆ ಇರಬೇಕು. ಅಂಕಗಳಷ್ಟೇ ವಿದ್ಯಾರ್ಜನೆ ಅಲ್ಲ, ಕಲಿತಷ್ಟೂ ನಮಗೆ ಜ್ಞಾನ ದಕ್ಕುತ್ತದೆ. ಆಲಿಸುವ ಗುಣವನ್ನು ನಾವು ಬೆಳೆಸಿಕೊಳ್ಳಬೇಕು. ಬದುಕು ಸಾರ್ಥಕಗೊಳ್ಳಲು ಶೋಧಿಸಬೇಕು. ಆಗ ಪ್ರಪಂಚ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಮಕ್ಕಳಲ್ಲಿ ದೂರದೃಷ್ಟಿ, ಸಮಚಿತ್ತ, ಸಮಭಾವ ಇರಬೇಕು. ಸ್ಥಿತ್ಯಂತರ ಕಾಲಘಟ್ಟದಲ್ಲಿ ನಾವಿದ್ದೇವೆ. ನಮ್ಮ ಭವಿಷ್ಯ ಕರಾಳವಾಗಬಾರದು ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಡಿವಿಎಸ್ ಸಂಸ್ಥೆ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಸಹಕಾರ್ಯದರ್ಶಿ ಎ.ಸತೀಶ್‌ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಪ್ರಾಚಾರ್ಯೆ ಸವಿತಾ ಎನ್.ರಾವ್, ಸಂಸ್ಕೃತ ಉಪನ್ಯಾಸಕ ದತ್ತಮೂರ್ತಿ ಭಟ್ ಇತರರಿದ್ದರು.