

ಮುಂಬೈ: ಲವ್ ಮತ್ತು ಲವ್ ಮ್ಯಾರೇಜ್ ವಿರುದ್ಧ ಕಾಲೇಜು ವಿದ್ಯಾರ್ಥಿನಿಯರಿಂದ ಪ್ರೇಮಿಗಳ ದಿನದ ಅಂಗವಾಗಿ ಪ್ರತಿಜ್ಞೆಯನ್ನು ಸ್ವೀಕರಿಸಿದ್ದ ಮಹಾರಾಷ್ಟ್ರದ ಅಮರಾವತಿ ಕಾಲೇಜು ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರಿಬ್ಬರನ್ನು ಅಮಾನತು ಮಾಡಲಾಗಿದೆ.
ಅಮರಾವತಿಯ ಮಹಿಳಾ ಕಲಾ-ವಾಣಿಜ್ಯ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಫೆ. 13ರಂದು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಶಿಬಿರದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ್ದರು. ಈ ಹಿನ್ನೆಲೆಯಲ್ಲಿ ವಿದರ್ಭ ಯುವ ಕಲ್ಯಾಣ ಸಮಾಜ ಅಮಾನತು ಮಾಡಿದೆ.
ನಾವು ಯಾವುದೇ ಕಾರಣಕ್ಕೂ ಪ್ರೇಮದ ಬಲೆಯಲ್ಲಿ ಬೀಳುವುದಿಲ್ಲ ಅಥವಾ ಪ್ರೇಮ ವಿವಾಹ ಆಗುವುದಿಲ್ಲ ಎಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗಿತ್ತು. ಬಳಿಕ ಈ ವಿಚಾರ ವೈರಲ್ ಆಗಿ, ಅನೇಕ ಮಹಿಳಾ ನಾಯಕಿಯರು ಮತ್ತು ಕಾರ್ಯಕರ್ತೆಯರು ಭಾರಿ ಆಕ್ರೋಶ ಹೊರಹಾಕಿದ್ದರು.
ಇದರ ತನಿಖೆಗೆ ಶಿಕ್ಷಣ ಸಂಸ್ಥೆಯು ಏಕಸದಸ್ಯ ಸಮಿತಿಯನ್ನು ರಚಿಸಿತ್ತು. ತನಿಖೆಯ ಬಳಿಕ ವರದಿ ಸಲ್ಲಿಸಲಾಗಿದ್ದು, ಪ್ರಾಂಶುಪಾಲ ರಾಜೇಂದ್ರ ಹವಾರೆ, ಪ್ರದೀಪ್ ದಂಡೆ ಮತ್ತು ಎನ್ಎಸ್ಎಸ್ ಪ್ರೋಗ್ರಾಮ್ ಆಫೀಸರ್ ವಿ.ಡಿ. ಕಪಾಸೆಯನ್ನು ಅಮಾನತು ಮಾಡಿರುವುದಾಗಿ ಫೆ.27ರಂದು ಹೊರಡಿಸಿರುವ ಆದೇಶದಲ್ಲಿ ವಿದರ್ಭ ಯುವ ಕಲ್ಯಾಣ ಸಮಾಜದ ಕಾರ್ಯದರ್ಶಿ ಯುವರಾಜ್ ಸಿಂಗ್ ಚೌಧರಿ ತಿಳಿಸಿದ್ದಾರೆ.
ಪ್ರತಿಜ್ಞಾ ವಿಧಿಗಾಗಿ ಪ್ರಾಧ್ಯಾಪಕರು ಯಾವುದೇ ಲಿಖಿತ ರೂಪದ ಅನುಮತಿಯನ್ನು ಪಡೆದಿರಲಿಲ್ಲ. ಈ ರೀತಿಯ ಅಸಂವಿಧಾನಿಕ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿತಿನ್ ಧಂಡೆ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಫೆ. 15ರಂದು ಪ್ರಾಧ್ಯಾಪಕರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಬೆನ್ನಿಗೆ ನಿಂತ ಶಾಸಕ
ಅಮಾನತು ಆದೇಶದ ವಿರುದ್ಧ ಕಿಡಿಕಾರಿರುವ ದರಿಯಾಪುರ ಕ್ಷೇತ್ರದ ಶಾಸಕ ಬಲ್ವಂತ್ ವಾಂಖೆಡೆ, ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರು ಕೂಡ ಅಮಾನತು ಆದೇಶ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದರು. ಸ್ಪೀಕರ್ ನನ್ನ ಬೇಡಿಕೆಯನ್ನು ಕೇಳಿದ್ದಾರೆ ಅಮಾನತು ಆದೇಶವನ್ನು ವಾಪಸ್ ಪಡೆಯಲು ನಿರ್ದೇಶಿಸುವ ಭರವಸೆ ಇದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. (ಏಜೆನ್ಸೀಸ್)