

ಇಸ್ಲಾಮಾಬಾದ್: ಭಾರತದ ವಿರುದ್ಧದ 1999ರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿರುವ ಬಗ್ಗೆ ಪಾಕಿಸ್ತಾನಿ ಸೇನೆಯು ಇಪ್ಪತ್ತೈದು ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಪ್ಪಿಕೊಂಡಿದೆ.
ರಕ್ಷಣಾ ದಿನದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ಕಾರ್ಗಿಲ್ ಯುದ್ಧ ಸೇರಿದಂತೆ ಭಾರತದೊಂದಿಗಿನ ವಿವಿಧ ಸಂಘರ್ಷಗಳಲ್ಲಿ ಹುತಾತ್ಮರಾದ ಪಾಕಿಸ್ತಾನಿ ಸೈನಿಕರಿಕೆ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪಾಕಿಸ್ತಾನಿ ಸಮುದಾಯವು ಧೈರ್ಯಶಾಲಿ ಜನರ ಸಮುದಾಯವಾಗಿದೆ. ಅವರು ಸ್ವಾತಂತ್ರ್ಯದ ಮಹತ್ವ ಮತ್ತು ಅದನ್ನು ಹೇಗೆ ಪಾವತಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
1948, 1965, 1971 ಅಥವಾ 1999ರ ಕಾರ್ಗಿಲ್ ಯುದ್ಧವೇ ಆಗಿರಲಿ, ದೇಶ ಮತ್ತು ಇಸ್ಲಾಂ ಧರ್ಮಕ್ಕಾಗಿ ನಮ್ಮ ಸಾವಿರಾರು ಸೈನಿಕರುತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ತಿಳಿಸಿದರು. ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರ ಈ ಹೇಳಿಕೆಯು ಕಾರ್ಗಿಲ್ನಲ್ಲಿ ಪಾಕಿಸ್ತಾನಿ ಸೈನಿಕರ ಸಾವನ್ನು ಅವರು ನೇರವಾಗಿ ಒಪ್ಪಿಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ.
ಇಸ್ಲಾಮಾಬಾದ್ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಮಿಲಿಟರಿ ಒಳಗೊಳ್ಳುವಿಕೆಯನ್ನು ಸತತವಾಗಿ ನಿರಾಕರಿಸುತ್ತಲೆ ಬಂದಿದೆ. ಆರಂಭದಲ್ಲಿ ಕಾರ್ಗಿಲ್ಗೆ ಪ್ರವೇಶಿಸಿದ ನುಸುಳುಕೋರರನ್ನು ಕಾಶ್ಮೀರಿ ಭಯೋತ್ಪಾದಕರು ಮತ್ತು ಅವರು ಮುಜಾಹಿದ್ದೀನ್ ಎಂದು ಕರೆಯುವವರಿಂದ ನಡೆಸಲಾಗಿದೆ ಎಂದು ಪಾಕಿಸ್ತಾನವು ಹೇಳಿಕೊಂಡಿತ್ತು. ಆದರೀಗ ಸೇನಾ ಮುಖ್ಯಸ್ಥ ಮುನೀರ್ ಅವರ ಹೇಳಿಕೆಯು ಪಾಕ್ ಪ್ರತಿ ಬಾರಿ ನೀಡುತ್ತಿದ್ದ ಹೇಳಿಕೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.
1999ರ ಮೇ ಮತ್ತು ಜುಲೈ ನಡುವೆ ನಡೆದ ಕಾರ್ಗಿಲ್ ಯುದ್ಧವು, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಭಾರತದ ಭಾಗಕ್ಕೆ ನುಸುಳಿದ್ದ ಪಾಕಿಸ್ತಾನಿ ಪಡೆಗಳನ್ನು 'ಆಪರೇಷನ್ ವಿಜಯ್' ಅಡಿಯಲ್ಲಿ ಭಾರತವು ಆಯಕಟ್ಟಿನ ಪೋಸ್ಟ್ಗಳಿಂದ ಹಿಮ್ಮೆಟ್ಟುವಂತೆ ಮಾಡಿತ್ತು. ಈ ಕಾರ್ಯಾಚರಣೆಯು ಪಾಕಿಸ್ತಾನದ ಸೋಲಿಗೆ ಕಾರಣವಾಯಿತು. ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಆಗಿನ ಪಾಕಿಸ್ತಾನಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಕಾರ್ಗಿಲ್ ವಲಯದಿಂದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕಾಶ್ಮೀರದ ಪ್ರಾದೇಶಿಕ ವಿವಾದ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಗಡಿಯಾಚೆಗಿನ ಚಕಮಕಿಗಳು ಸೇರಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧಗಳು ಹಲವಾರು ಸಮಸ್ಯೆಗಳಿಂದ ಹದಗೆಟ್ಟಿದೆ.(ಏಜೆನ್ಸೀಸ್)