ಮೊದಲ ಬಾರಿ ಇಡೀ ಶಿವಮೊಗ್ಗ ಜಿಲ್ಲೆಗೆ ಬರ

drought
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಮಳೆ ಕೊರತೆಯಿಂದ ಒಣಗಿದ ಬೆಳೆ.
Published on

ಶಿವಮೊಗ್ಗ: ಇಷ್ಟು ವರ್ಷ ಮಳೆ ಕುಸಿತಕಂಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಒಂದೆರಡು ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ ನಿದರ್ಶನಗಳಿವೆ. ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಏಳೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡುವಂತೆ ಸಚಿವ ಸಂಪುಟ ಉಪಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇನ್ನು ಅಧಿಕೃತ ಘೋಷಣೆಯಷ್ಟೇ ಬಾಕಿ.

ಅರೆ ಮಲೆನಾಡು ಪ್ರದೇಶಗಳೆಂದೇ ಗುರುತಿಸಲ್ಪಟ್ಟಿರುವ ಶಿಕಾರಿಪುರ, ಸೊರಬ ತಾಲೂಕುಗಳು ಹಲವು ಬಾರಿ ಬರಪೀಡಿತವೆಂದು ಘೋಷಿಸಲ್ಪಟ್ಟಿವೆ. ಆದರೆ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿರುವ ಭದ್ರಾವತಿ ತಾಲೂಕು, ತುಂಗಾ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗ ತಾಲೂಕು ಬರಪೀಡಿತ ಎಂದು ಗುರುತಿಸಿಕೊಂಡಿದ್ದು ತೀರಾ ವಿರಳ.
ಇನ್ನು ಅಪ್ಪಟ ಮಲೆನಾಡು ತಾಲೂಕುಗಳಾಗಿರುವ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕುಗಳೂ ಈ ಬಾರಿ ಬರಪೀಡಿತವಾಗಿರುವುದು ಮುಂದಿನ ಕರಾಳತೆಗೆ ನಿದರ್ಶನವಾಗಿದೆ. ಇಡೀ ಜಿಲ್ಲೆಯ ಬರಪೀಡಿತ ಎಂದು ಘೋಷಣೆಗೆ ಬಾಕಿ ಇರುವ ಸಂದರ್ಭದಲ್ಲೇ ಭದ್ರಾ ಹಾಗೂ ತುಂಗಾ ಜಲಾಶಯದ ನೀರಿನ ಒಳಹರಿವು ಗಣನೀಯವಾಗಿ ಕುಸಿಯುತ್ತಿರುವುದು ಭವಿಷ್ಯದ ಆತಂಕಕ್ಕೆ ಕಾರಣವಾಗಿದೆ.
ಮಾರ್ಗಸೂಚಿ ಪ್ರಕಾರ ಜಿಲ್ಲೆಯ ಏಳೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ವಾರದ ಹಿಂದೆಯೇ ಹೇಳಿದ್ದರು. ಇದೀಗ ಅವರ ಲೆಕ್ಕಾಚಾರ ನಿಜವಾಗಿದೆ. ಮಳೆ ಕೊರತೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ನೀಡಿದ್ದ ವರದಿಯನ್ನು ಸಚಿವ ಸಂಪುಟದ ಉಪಸಮಿತಿ ಮಾನ್ಯ ಮಾಡಿದೆ.
ಜಿಲ್ಲೆಯಲ್ಲಿ ಶೇ.40 ಮಳೆ ಕೊರತೆ: ಒಂದು ತಿಂಗಳು ತಡವಾಗಿ ಆರಂಭವಾದ ಮುಂಗಾರು ನಂತರವಾದರೂ ಆರ್ಭಟಿಸಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಜುಲೈ ಮೂರು ಹಾಗೂ ನಾಲ್ಕನೇ ವಾರದಲ್ಲಿ ತಕ್ಕ ಮಟ್ಟಿಗೆ ಸುರಿದ ವರುಣ ಕ್ರಮೇಣ ಮುನಿಸಿಕೊಂಡಿದ್ದ. ಜುಲೈನಲ್ಲಿ ಕ್ಷೀಣವಾದ ಮಳೆ ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು. ಜೂನ್‌ನಿಂದ ಆಗಸ್ಟ್ ಮಧ್ಯ ಭಾಗದವರೆಗೂ ವಾಡಿಕೆಯಷ್ಟು ಮಳೆಯಾಗಿಲ್ಲ. ವಾಡಿಕೆ ಪ್ರಕಾರ 1,883 ಮಿಮೀ ಮಳೆಯಾಗಬೇಕಿತ್ತು. ಆದರೆ ಸುರಿದಿದ್ದು 1,143 ಮಿಮೀ ಮಾತ್ರ. ಒಟ್ಟಾರೆ ಮಳೆಯ ಪ್ರಮಾಣದಲ್ಲಿ ಶೇ.40ರಷ್ಟು ಕೊರತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net