

ದೇವದುರ್ಗ: ತಾಲೂಕಿನ ಗಬ್ಬೂರು ಹೋಬಳಿಯಲ್ಲಿ ಪುನರ್ವಸು ಮಳೆ ಬಾರದ ಕಾರಣ ಇಂಗಳದಾಳ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ರೈತರ ಮಕ್ಕಳು ದೇವರ ಮೊರೆ ಹೋಗಿದ್ದು, ಶುಕ್ರವಾರದಿಂದ ಜಲಾಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಗ್ರಾಮದ ಆರಾಧ್ಯದೈವ ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಆಂಜನೇಯ ದೇವಾಲಯ, ಶ್ರೀ ಬಸವಲಿಂಗೇಶ್ವರ ತಾತನ ಕಟ್ಟೆ, ಶ್ರೀ ಮಾರೆಮ್ಮ ದೇವಿ, ಶ್ರೀ ತಾಯಮ್ಮದೇವಿ, ಶ್ರೀ ಪೊನ್ನಮ್ಮ ದೇವಿ ಸೇರಿ ವಿವಿಧ ದೇವರಿಗೆ ರೈತರ ಮಕ್ಕಳು ಜಲಾಭಿಷೇಕ ಮಾಡಿದರು.
ಪ್ರತಿದಿನ 5ಗಂಟೆಗೆ ಬಿಂದಿಗೆಯಲ್ಲಿ ನೀರು ತಂದು ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಐದು ದಿನಗಳ ಕಾಲ ಈ ಕಾರ್ಯ ಕೈಗೊಂಡಿದ್ದಾರೆ. ಪೂಜಾರಿಗಳಾದ ಪ್ರಭಾಕರ ಸ್ವಾಮಿ, ಹಂಪಯ್ಯ ಸ್ವಾಮಿ, ಬೂದಯ್ಯಸ್ವಾಮಿ, ಮುಖಂಡರಾದ ಬಸವರಾಜಗೌಡ, ನಾಗರಾಜಪ್ಪಗೌಡ, ಮಲ್ಲಯ್ಯ ಪೂಜಾರಿ, ಪ್ರಭಾಕರ ಪಾಟೀಲ್, ಶರಣಪ್ಪ ಮಡಿವಾಳ, ವಿರೂಪಾಕ್ಷಿ ಪೂಜಾರಿ, ಫಕೀರಪ್ಪ ನಾಯಕ, ಬಸಲಿಂಗಪ್ಪ, ಮಂಜುನಾಥ ಇತರರಿದ್ದರು.