ಲೂಸ್​ ಸ್ವೀಟ್​ಗೂ ಟೈಟ್​ ರೂಲ್ಸ್​.. ಇದು ಸ್ವೀಟ್​ ಅಂಗಡಿಯವರಿಗೆ ಸಿಹಿ ಸುದ್ದಿನಾ?

sweet
Published on

ನವದೆಹಲಿ: ಮುಂದಿನ ವಾರದಿಂದ ಸ್ವೀಟ್​ ಅಂಗಡಿಗೆ ಹೋಗಿ, 'ಸ್ವೀಟ್​ ಫ್ರೆಷ್​ ಆಗಿದ್ಯಾ?' ಎಂದು ಕೇಳಲೇಬೇಕಾದ ಅಗತ್ಯವಿಲ್ಲ. ಏಕೆಂದರೆ ಇದೀಗ ಲೂಸ್​ ಸ್ವೀಟ್​ಗೂ ಟೈಟ್​ ರೂಲ್ಸ್​ ಬಂದಿದೆ. ಇದು ಸ್ವೀಟ್​ ಅಂಗಡಿಯವರಿಗೆ ಸಿಹಿ ಸುದ್ದಿ ಆಗಿಲ್ಲದಿರಬಹುದು, ಆದರೆ ಸ್ವೀಟ್​ ಖರೀದಿಸುವವರಿಗಂತೂ ಸಿಹಿ ಸುದ್ದಿ ಎಂಬುದು ಖಚಿತ.

ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟಗಳ ಪ್ರಾಧಿಕಾರ (ಎಫ್​ಎಸ್​ಎಸ್​ಎಐ) ಇಂದು ಹೊಸದೊಂದು ಸುತ್ತೋಲೆ ಹೊರಡಿಸಿದ್ದು, ದೇಶದ ಎಲ್ಲ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚನೆಯೊಂದನ್ನು ರವಾನಿಸಿದ್ದಾರೆ.

ಹೊಸ ಆದೇಶದ ಪ್ರಕಾರ, ಎಲ್ಲ ಸ್ವೀಟ್​ ಅಂಗಡಿಗಳ ಮಾಲೀಕರು ಇತರ ಆಹಾರ ಪೊಟ್ಟಣಗಳಲ್ಲಿ ಇರುವಂತೆ 'ಬೆಸ್ಟ್​ ಬಿಫೋರ್​ ಡೇಟ್' ಪ್ರಕಟಿಸುವುದು ಕಡ್ಡಾಯ. ಪೊಟ್ಟಣ ಕಟ್ಟದೆ ಅಂದರೆ ತೆರೆದಿಟ್ಟು ಅಥವಾ ಬಿಡಿಯಾಗಿ ಮಾರಲಾಗುವ ಸ್ವೀಟ್​ಗಳ ಬಗ್ಗೆಯೂ 'ಬೆಸ್ಟ್​ ಬಿಫೋರ್​ ಡೇಟ್' ಘೋಷಿಸಿರುವುದು ಕಡ್ಡಾಯ. ವಿಶೇಷವೆಂದರೆ ಇದು ಅಕ್ಟೋಬರ್​ 1ರಿಂದಲೇ ಅನ್ವಯಿಸಲಿದೆ. ಸಿಹಿತಿನಿಸನ್ನು ಬಿಡಿಯಾಗಿ ಮಾರಾಟ ಮಾಡುತ್ತಿದ್ದಲ್ಲಿ ಮಾರಾಟಕ್ಕಿಟ್ಟ ಸ್ವೀಟ್​ ಕಂಟೇನರ್​ ಅಥವಾ ಟ್ರೇ ಮೇಲೆ 'ಬೆಸ್ಟ್​ ಬಿಫೋರ್​ ಡೇಟ್' ಇರಲೇಬೇಕು. ಅಲ್ಲದೆ ಸ್ವೀಟ್​ ಮಾರಾಟಗಾರರು 'ಉತ್ಪಾದನೆಯ ದಿನಾಂಕ (ಮ್ಯಾನುಫ್ಯಾಕ್ಚರ್ಡ್​ ಡೇಟ್​)' ನಮೂದಿಸಬಹುದಾದರೂ ಅದು ಕಡ್ಡಾಯವೇನಲ್ಲ. ಆದರೆ 'ಬೆಸ್ಟ್​ ಬಿಫೋರ್​ ಡೇಟ್' ಕಡ್ಡಾಯ ಎಂದು ಎಫ್​ಎಸ್​ಎಸ್ಎಐ ಆದೇಶಿಸಿದೆ.

ಸ್ವೀಟ್​ ಅಂಗಡಿಗಳ ಮಾಲೀಕರು ಆಯಾ ಸ್ವೀಟ್ ವೆರೈಟಿ ಹಾಗೂ ಸ್ಥಳೀಯ ಹವಾಮಾನದ ಮೇರೆಗೆ ಅವುಗಳ ಬಾಳಿಕೆ ಅವಧಿ ನಿರ್ಧರಿಸಬಹುದಾಗಿದೆ. ಜತೆಗೆ ಎಫ್​​ಎಸ್​ಎಸ್​ಎಐ ವೆಬ್​ಸೈಟ್​ನಲ್ಲಿ ವಿವಿಧ ಸ್ವೀಟ್​ಗಳ ಸೆಲ್ಫ್​ಲೈಫ್​ ಕುರಿತ ಪಟ್ಟಿಯೂ ಲಭ್ಯವಿದೆ. ಅದನ್ನಾಧರಿಸಿ 'ಬೆಸ್ಟ್​ ಬಿಫೋರ್​ ಡೇಟ್' ಪ್ರಕಟಿಸಬಹುದು ಎಂಬುದಾಗಿಯೂ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net