ಸಾಮೂಹಿಕ ವಿವಾಹದ ಮಂಗಳಸೂತ್ರಗಳಿಗೆ

lkr puje
Published on

ಲಕ್ಕೂರು: ಮಾಲೂರು ತಾಲೂಕಿನ ಪ್ರಸಿದ್ಧ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಬಾಗೇಪಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಮಂಗಳವಾರ ಭೇಟಿ ನೀಡಿ, ಸಾಮೂಹಿಕ ವಿವಾಹದ ಜೋಡಿಗಳಿಗೆ ವಿತರಿಸಲಿರುವ ಮಂಗಳಸೂತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

ತಾಲೂಕಿನ ಶ್ರೀ ಕ್ಷೇತ್ರ ಗಡಿದಂ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಸನ್ನಿಧಿಯಲ್ಲಿ ಎಸ್​.ಎನ್​ ಸುಬ್ಬಾರೆಡ್ಡಿ ಚಾರಿಟಬಲ್​ ಟ್ರಸ್ಟ್​ನಿಂದ ಡಿ.6ರಂದು 22ನೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಸಾಮೂಹಿಕ ವಿವಾಹಗಳಿಗೆ ನೋಂದಣಿಯಾದ 180 ಜೋಡಿಗಳಿಗೆ ವಿತರಿಸುವ ಮಂಗಳಸೂತ್ರಗಳನ್ನು, ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಮಾತನಾಡಿ, ಡಿ.6ರಂದು ಜರುಗಲಿರುವ ಸಾಮೂಹಿಕ ವಿವಾಹಗಳಿಗೆ 180 ಜೋಡಿಗಳು ನೋಂದಣಿಯಾಗಿದ್ದು, ಒಂದೊಂದು ಜೋಡಿಗೆ ಪ್ರತ್ಯೇಕ ಒಬ್ಬ ಪುರೋಹಿತರಂತೆ 180 ಮಂದಿ ಶುಭಕಾರ್ಯ ನೆರವೇರಿಸಲಿದ್ದಾರೆ. ಪ್ರತಿ ಜೋಡಿಗೂ ಅವರ ಜೀವನೋಪಾಯವಾಗಿ ಒಂದು ಸೀಮೆ ಹಸು ನೀಡಲಾಗುವುದು. ಅಲ್ಲದೇ ಪರಿಶಿಷ್ಟ ಜಾತಿ, ಪಂಗಡದ ಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 50 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದರು.

ದೇವಸ್ಥಾನದ ಸಮಿತಿಯ ಮಾಜಿ ಅಧ್ಯಕ್ಷ ಟಿ.ಆರ್​.ವೆಂಕಟೇಶ್​ ಗೌಡ, ಮುಖಂಡ ಟಿ.ವಿ.ಹರೀಶ್​, ಕಾರ್ಯನಿರ್ವಹಣಾಧಿಕಾರಿ ಟಿ.ಸೆಲ್ವಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net