ವ್ಯವಸ್ಥೆಯನ್ನೇ ಹಾಳುಮಾಡುತ್ತಿರುವ ಆಹಾರ ರಾಜಕೀಯ

Foods 11
Published on

ಅಣುಬಾಂಬ್ ತಯಾರಿಕೆಯಲ್ಲಿ ಬಳಸುವ ವಸ್ತುವಿನಿಂದಲೇ ರಾಸಾಯನಿಕ ಗೊಬ್ಬರವೂ ತಯಾರಾಗುತ್ತದೆ. ನಮ್ಮ ಬೆಳೆಗಳಿಗೆ ಅಂಥ ವಸ್ತುವನ್ನು ಬಳಸುತ್ತಿರುವಾಗ ಆರೋಗ್ಯ ಕಾಪಾಡಿಕೊಳ್ಳಲು ಹೇಗೆ ಸಾಧ್ಯ ಹೇಳಿ?!

ಇಂತಹ ಸತ್ಯವನ್ನು ಮುಚ್ಚಿಟ್ಟು ಎಕರೆಗೆ ಇಷ್ಟು ಬೆಳೆಯಬಹುದು, ಅಷ್ಟು ಬೆಳೆಯಬಹುದು ಎಂದು ಪ್ರಚಾರ ಮಾಡುವ ಕಂಪನಿಗಳು, ರೈತರನ್ನು ಮರಳು ಮಾಡುತ್ತಿವೆ. ಕಂಪನಿಗಳ ಜಾಲಕ್ಕೆ ಸಿಲುಕಿ ರಾಸಾಯನಿಕ ಗೊಬ್ಬರ ರೈತರು ಯಥೇಚ್ಛವಾಗಿ ಬಳಸುತ್ತಿದ್ದಾರೆ. ಗೊಬ್ಬರ ಸಿಗದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಇದನ್ನೆಲ್ಲ ನೋಡಿದರೆ ನಿಜಕ್ಕೂ ದಿಗಿಲಾಗುತ್ತದೆ.

ವಿಜ್ಞಾನಿಯಾಗಿ ನಾನು ಸಂಶೋಧನೆಗಳಿಂದ ಕಂಡುಕೊಂಡ ಸತ್ಯವನ್ನು ಜನರಿಗೆ ತಿಳಿಸದಿದ್ದರೆ ದೊಡ್ಡ ಅಪಚಾರ ಮಾಡಿದಂತೆ ಆಗುತ್ತದೆ. ಹಾಗಾಗಿ ‘ನಮ್ಮ ಪಾರಂಪರಿಕ ಆಹಾರವೇ ಆರೋಗ್ಯ’ ಎನ್ನುವುದನ್ನು ತಿಳಿಸುವ ಕಾರ್ಯದಲ್ಲಿ ತೊಡಗಿದ್ದೇನೆ.

ಜಗತ್ತಿನಲ್ಲಿ ಇಂದು ಆಹಾರ ರಾಜಕೀಯ ತುಂಬ ಆಳವಾಗಿ ಬೇರೂರಿದೆ. ಪ್ರಪಂಚದ ವ್ಯವಸ್ಥೆಯನ್ನೇ ಅದು ಆಳುತ್ತಿದೆ, ಹಾಳುಗೆಡವುತ್ತಿದೆ. ಇದರ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ‘ಪಾಶ್ಚಿಮಾತ್ಯರು ಹೇಳಿದ್ದೇ ವಿಜ್ಞಾನ’ ಎಂದು ನಂಬಿರುವ ಭಾರತೀಯರು ಅನಾದಿ ಕಾಲದಿಂದ ನಮ್ಮ ಪೂರ್ವಿಕರು ಅನುಸರಿಸಿಕೊಂಡು ಬರುತ್ತಿದ್ದ ಕೃಷಿಯನ್ನು , ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಬಿಟ್ಟು ಪಾಶ್ಚಿಮಾತ್ಯ ಪದ್ಧತಿಯ ಕಡೆ ಮುಖ ಮಾಡಿದ್ದಾರೆ.

ಹಸಿರುಕ್ರಾಂತಿಯ ಹೆಸರಿನಲ್ಲಿ ಅಕ್ಕಿ, ಗೋಧಿಯನ್ನು ನಮ್ಮ ತಲೆಗೆ ಅಂಟಿಸಿಬಿಟ್ಟಿದ್ದಾರೆ. ಗೋಧಿ ನಮ್ಮ ದೇಶದ ಬೆಳೆ ಅಲ್ಲ. ಅಕ್ಕಿ, ಗೋಧಿ ತಿನ್ನುವುದರಿಂದ ಗ್ಲ್ಲೂಕೋಸ್ ನೊರೆಯಂತೆ ನಮ್ಮ ದೇಹವನ್ನು ಸೇರುತ್ತಿದೆ. ಇದರ ಪರಿಣಾಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಜನರ ಆರೋಗ್ಯ ಹದಗೆಡುತ್ತಿದೆ. ಸಣ್ಣ ಮಕ್ಕಳಲ್ಲಿಯೂ ದೊಡ್ಡ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ದೇಶದ ಹಲವು ರಾಜ್ಯಗಳಲ್ಲಿ ಮೂಲ ಕೃಷಿ ಬಿಟ್ಟು, ಭತ್ತ, ಗೋಧಿ, ಕಬ್ಬು ಬೆಳೆಯಲಾಗುತ್ತಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇದರ ಬಗ್ಗೆ ಜಾಗೃತರಾಗಿರುವುದು, ಇತರರಲ್ಲಿಯೂ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ.

ಮಾಂಸ, ಮೊಟ್ಟೆ, ಹಾಲು ರ್ವ್ಯಜ: ಆಂಧ್ರಪ್ರದೇಶದ ಕಡಪ ಜಿಲ್ಲೆ ಪ್ರೊದ್ದುತೂರು ಪಟ್ಟಣದಲ್ಲಿ ಮುಸ್ಲಿಂ ಕುಟುಂಬದಲ್ಲಿ ನಾನು ಹುಟ್ಟಿದ್ದರೂ ಬೆಳೆದಿದ್ದು ಹಾಸ್ಟೆಲ್​ನಲ್ಲಿ. ಹಾಗಾಗಿ ಅಲ್ಲಿದ್ದ ಪರಿಸರವೇ ನನಗೆ ಭಾರತೀಯತೆ, ದೇಶಪ್ರೇಮ, ಸನಾತನ ಸಂಸ್ಕೃತಿಯನ್ನು ಪರಿಚಯಿಸಿತು. ಇದರ ಪರಿಣಾಮ ನಾನು ಮಾಂಸ, ಮೊಟ್ಟೆ ತಿನ್ನುವುದಿಲ್ಲ. ಅಷ್ಟೇ ಏಕೆ, ಹಾಲನ್ನೂ ಕುಡಿಯುವುದಿಲ್ಲ.

ಪದವಿಪೂರ್ವ ಶಿಕ್ಷಣಕ್ಕಾಗಿ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಗೆ ಆಯ್ಕೆಯಾದೆ. ಇಲ್ಲಿಗೆ ಬಂದು ಹಾಸ್ಟೆಲ್​ನಲ್ಲಿ ಇದ್ದ್ದುಕೊಂಡೇ ನನ್ನ ಶಿಕ್ಷಣ ಮುಂದುವರಿಸಿದೆ. ಬಿಎಸ್ಸಿ (ಇ.ಡಿ), ಎಂಎಸ್ಸಿ (ಇ.ಡಿ) ಪದವಿ ಬಳಿಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ಟಿರಾಯ್್ಡ ವಿಷಯದ ಮೇಲೆ ಪಿಎಚ್.ಡಿ ಮಾಡಿದೆ.

ಹೆಚ್ಚಿನ ಸಂಶೋಧನೆಗಾಗಿ ಅಮೆರಿಕದ ಒರೆಗಾನ್​ನ ಬೀವರ್ಟನ್​ಗೆ ಹೋದೆ. ಅಲ್ಲಿ ಪರಿಸರ ವಿಜ್ಞಾನದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆದೆ. ಬಳಿಕ ಮೈಸೂರಿಗೆ ಮರಳಿ ಬಂದು ಕೇಂದ್ರ ಆಹಾರ ಸಂಶೋಧನೆ ಹಾಗೂ ತಂತ್ರಜ್ಞಾನ ಸಂಸ್ಥೆಯಲ್ಲಿ (ಸಿಎಫ್​ಟಿಆರ್​ಐ) ಮೂರೂವರೆ ವರ್ಷ ಬಯೋಕೆಮಿಸ್ಟ್ರಿ ಆಹಾರ ಪೌಷ್ಟಿಕಾಂಶದ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದೆ.

ಮತ್ತೆ ಅಮೆರಿಕದಲ್ಲಿ ಡುಪಾಂಟ್ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ವಿಭಾಗದಲ್ಲಿ ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿ ಭಾರತದಲ್ಲಿ ಒಂದು ವರ್ಷ, ಅಮೆರಿಕದಲ್ಲಿ ನಾಲ್ಕೂವರೆ ವರ್ಷ ಕೆಲಸ ಮಾಡಿದೆ. ಆದರೆ ಅಲ್ಲಿನ ಪರಿಸರ, ಸಂಶೋಧನೆಯಲ್ಲಿ ನಾನು ಕಂಡುಕೊಂಡ ಸತ್ಯಗಳನ್ನು ತಿಳಿಸಿ ನನ್ನ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಭಾರತಕ್ಕೆ ಮರಳಿ ಬಂದೆ.

ಊಟ ಬಲ್ಲವನಿಗೆ ರೋಗವಿಲ್ಲ: ಜನರ ಅನಾರೋಗ್ಯಕ್ಕೆ ನಾವಿಂದು ಅನುಸರಿಸುತ್ತಿರುವ ಆಹಾರ, ಕೃಷಿ ಪದ್ಧತಿ, ಆಹಾರ ತಯಾರಿಸುವ ವಿಧಾನವೇ ಕಾರಣ. ನಮ್ಮ ಹಿರಿಯರು ಹೇಳಿಕೊಟ್ಟಂತೆ ‘ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವ ತತ್ವದಂತೆ ನಮ್ಮ ಆರೋಗ್ಯ ನಮ್ಮ ಅಡುಗೆ ಮನೆಯಲ್ಲಿಯೇ ಇದೆ ಎನ್ನುವುದನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದ್ದೇನೆ.

ಬಹುರಾಷ್ಟ್ರೀಯ ಕಂಪನಿಯ ಲಾಭದಾಯಕ ಕೆಲಸ ಬಿಟ್ಟು ತಾಯ್ನಾಡಿಗೆ ಮರಳಿ ಆರೋಗ್ಯಕರ ಸಮಾಜದ ನಿರ್ವಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ. ‘ಆಹಾರದಿಂದ ಆರೋಗ್ಯ’ ಎಂಬ ಪರಿಕಲ್ಪನೆಯಲ್ಲಿ ಚಿಕಿತ್ಸೆ ನೀಡುತ್ತ ಅನೇಕರ ಕಾಯಿಲೆಗಳನ್ನು ಗುಣಪಡಿಸಬಹುದು ಎನ್ನುವುದನ್ನು ಸಂಶೋಧನೆ ಮೂಲಕ ಸಾಬೀತುಪಡಿಸಿದ್ದೇನೆ.

ನಮ್ಮ ದೇಸಿ ಆಹಾರ ಪದ್ಧತಿಗಳಿಂದ ಕ್ಯಾನ್ಸರ್, ಟೈಪ್-1 ಡಯಾಬಿಟಿಸ್, ಗ್ಯಾಂಗ್ರಿನ್ ಸೇರಿದಂತೆ ಅನೇಕ ಭಯಾನಕ ಕಾಯಿಲೆಗಳಿಂದ ಹೇಗೆ ಮುಕ್ತಿ ಹೊಂದಬಹುದು ಎಂದು ಇದರಿಂದ ಕಂಡುಕೊಂಡಿದ್ದೇನೆ. ನಾನು ಯಾವುದೇ ಮಾಟ, ಮಂತ್ರ ಮಾಡುವುದಿಲ್ಲ. ನಮ್ಮ ಆಹಾರ ವಿಧಾನದಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ, ಅತ್ಯಲ್ಪ ಪ್ರಮಾಣದ ಔಷಧಗಳಿಂದ ಇದೆಲ್ಲವೂ ಸಾಧ್ಯ ಎನ್ನುವುದನ್ನು ತಿಳಿಸಿಕೊಟ್ಟಿದ್ದೇನೆ.

‘ಒಳ್ಳೆಯ ಆಹಾರ, ಒಳ್ಳೆಯ ವಿಚಾರ, ಒಳ್ಳೆಯ ನಿದ್ರೆ ಮನುಷ್ಯನಿಗೆ ಶ್ರೇಷ್ಠ’ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಆದರೆ ನಾವಿಂದು ‘ಯುಕ್ತ’ ಆಹಾರವನ್ನು ‘ವಿಷಯುಕ್ತ’ವನ್ನಾಗಿಸಿ ತಿನ್ನುತ್ತಿದ್ದೇವೆ. ರೋಗವಾಸಿ ಮಾಡಿಕೊಳ್ಳಲು ಆಹಾರವನ್ನು ಬಿಟ್ಟು, ಜೀವನ ಪರ್ಯಂತ ಮಾತ್ರೆಗಳನ್ನು ತಿನ್ನುವಂತಾಗಿದೆ. ಯಾವ ವೈದ್ಯರೂ ಸರಿಯಾದ ಆಹಾರ ಸೇವಿಸಲು ಸಲಹೆ ನೀಡುತ್ತಿಲ್ಲ. ವಿಶ್ವದೆಲ್ಲೆಡೆ ಬಂಡವಾಳಶಾಹಿಗಳು, ರಾಜಕಾರಣಿಗಳು ಉದ್ಯಮಿಗಳಾಗಿರುವುದರಿಂದ ಕೆಮಿಕಲ್ ಮಾಫಿಯಾ, ಮೆಡಿಕಲ್ ಮಾಫಿಯಾ ಬೆಳೆಯುತ್ತಿದೆ. ಒಂದು ಎಕರೆಯಲ್ಲಿ ಬೆಳೆ ಬೆಳೆಯಲು 250ರಿಂದ 380 ಕೆ.ಜಿ.ಯಷ್ಟು ಕೆಮಿಕಲ್ ಗೊಬ್ಬರ ಹಾಕುತ್ತಿದ್ದೇವೆ. ಇದಕ್ಕಾಗಿ ಸರ್ಕಾರ ಪ್ರತಿ ವರ್ಷ 4 ಲಕ್ಷ ಕೋಟಿ ರೂ. ಸಬ್ಸಿಡಿ ನೀಡುತ್ತಿದೆ! ನಮ್ಮ ಪದ್ಧತಿ, ನಮ್ಮ ಸಂಸ್ಕೃತಿ, ನಮ್ಮ ಪರಿಸರದಲ್ಲಿರುವ ನಾರಿನ ಅಂಶ ಇರುವ ಆಹಾರ ಸೇವಿಸುವ ಮೂಲಕ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವುದೇ ನನ್ನ ಆಶಯ.

ಹಳ್ಳಿ ಹಳ್ಳಿಯಲ್ಲಿ ಸಿರಿಧಾನ್ಯ ಸಂಗ್ರಹ: ನಮ್ಮ ಹಿರಿಯರು ಬೆಳೆಯುತ್ತಿದ್ದ ನವಣೆ, ಆರ್ಕ, ಸಾಮೆ, ಊದಲು, ಕೊರಲೆ ಬಿತ್ತನೆ ಬೀಜಗಳೇ ಮೂಲೆ ಸೇರಿವೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿರುವುದರಿಂದ ಜನರು ಅದಕ್ಕೇ ಒಗ್ಗಿಕೊಂಡಿದ್ದಾರೆ. ಅಕ್ಕಿ, ಗೋಧಿಯಲ್ಲಿ ಶೇ. 0.2 ಗ್ರಾಂನಷ್ಟು ನಾರಿನ ಅಂಶ ಇದ್ದರೆ, ಸಿರಿಧಾನ್ಯದಲ್ಲಿ ಶೇ. 8 ಗ್ರಾಂ ಇರುತ್ತದೆ. ನಾರಿನಂಶ ಇರುವ ಆಹಾರವೇ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ನಾನು ಅಮೆರಿಕದಿಂದ ಬಂದ ಬಳಿಕ ನಮ್ಮ ‘ಸಿರಿಧಾನ್ಯ’ಗಳ ಹುಡುಕಾಟಕ್ಕಾಗಿ ಹಳ್ಳಿಹಳ್ಳಿಗಳನ್ನು ತಿರುಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಕೆಲವರು ಕೊಟ್ಟ ಹಿಡಿಯಷ್ಟು ಧಾನ್ಯಗಳನ್ನು ತಂದು ನಮ್ಮ ಮನೆ ಅಂಗಳದಲ್ಲಿಯೇ ಬೆಳೆದು, ಮತ್ತೆ ಅದನ್ನು ಬೆಳೆಯುವ ರೈತರಿಗೆ ಕೊಟ್ಟೆ. ಬೆಳೆದ ರೈತರಿಂದ ಖರೀದಿಸಿ ಇನ್ನೂ ಹೆಚ್ಚು ಬೆಳೆಯಲು ಇತರ ರೈತರಿಗೆ ಕೊಟ್ಟೆ. ಹೀಗೆ ಒಬ್ಬರಿಂದ ಒಬ್ಬರಿಗೆ ಬೆಳೆಯುತ್ತ ಈಗ ರಾಜ್ಯದ ನಾನಾ ಕಡೆ, ಹೊರ ರಾಜ್ಯಗಳಲ್ಲಿಯೂ ಸಿರಿಧಾನ್ಯ ಬೆಳೆಯುವವರ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಯಾವುದೇ ಗೊಬ್ಬರ, ಕ್ರಿಮಿನಾಶ ಬೇಕಿಲ್ಲ. ಆದ್ದರಿಂದ ಹೆಚ್ಚು ವೆಚ್ಚವಿಲ್ಲದೆ ಬೆಳೆಯಬಹುದು. ಇನ್ನಷ್ಟು ರೈತರು ಮುಂದೆ ಬಂದರೆ ಹೆಚ್ಚೆಚ್ಚು ಜನರಿಗೆ ಇದು ತಲುಪುತ್ತದೆ. ಒಣಭೂಮಿಯಲ್ಲಿ ಕೂಡ ಇವುಗಳನ್ನು ಬೆಳೆಯಬಹುದು. ವಾರ್ಷಿಕ ಕೇವಲ 20 ಸೆಂ.ಮೀ. ಮಳೆ ಸಾಕು. ಭಾರತದ 60 ಪ್ರತಿಶತ ಭೂಮಿ ಒಣಭೂಮಿ. ರೈತರು ಈ ಬೆಳೆಗಳನ್ನು ಬೆಳೆದರೆ ಮುಂದಿನ 50 ವರ್ಷಗಳಲ್ಲಿ ಬರಗಾಲವೆಂಬುದೇ ಇರುವುದಿಲ್ಲ.

ಮೂಲ ಆಹಾರ ಪದ್ಧತಿ ಬೇಕು: ಹದಿಹರೆಯದ ಮಧುಮೇಹ, ಬಾಲ್ಯದಲ್ಲಿ ಊಬಕಾಯ, ಹೆಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲಿ ಮುಟ್ಟಾಗುವುದು, ಅನಿಯಮಿತ ಋತುಚಕ್ರ, ಪಾಲಿಸಿಸ್ಟಿಕ್ ಓವರಿ, ಬಂಜೆತನ, ರಕ್ತಹೀನತೆ, ಬಾಣಂತಿಯರಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುವುದು, ಮಲಬದ್ಧತೆ ಇತ್ಯಾದಿಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಲು ಕಾರಣ ಪಾಶ್ಚಿಮಾತ್ಯ ಆಹಾರ ಪದ್ಧತಿ. ಅಧಿಕ ಹಾಲು ಉತ್ಪಾದನೆ ಮಾಡಲು ಆಕಳುಗಳಿಗೆ ಓಕ್ಸಿಟೋಸಿನ್/ ಈಸ್ಟ್ರೋಜನ್ ಹಾರ್ವೇನ್ ಇಂಜೆಕ್ಷನ್​ಗಳನ್ನು ನೀಡುತ್ತಾರೆ. ಈ ಹಾರ್ವೇನುಗಳ ಸೂಕ್ಷ್ಮ ಉಳಿಕೆಗಳು ಹಾಲಿನಲ್ಲಿ ಇರುವುದೇ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿ ಋತುಮತಿಗಳಾಗಲು ಕಾರಣ. ಬೇಕರಿ ಉತ್ಪನ್ನ ತಯಾರಿಸುವುದಕ್ಕಾಗಿ ಗೋಧಿ ಹಿಟ್ಟನ್ನು ಮೈದಾ ಹಿಟ್ಟನ್ನಾಗಿ ಪರಿವರ್ತಿಸಲು ಬ್ಲೀಚಿಂಗ್ ಏಜೆಂಟ್ ಅಲೆಕ್ಸಾನ್ ಬಳಸುವುದರಿಂದ ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶ ಉತ್ಪಾದನೆ ಕ್ಷಮತೆ ಕ್ಷೀಣಿಸುತ್ತದೆ. ಇದು ಕಾಯಿಲೆಗಳ ಮೂಲ. ಬೆಂಗಳೂರೊಂದರಲ್ಲೇ ‘ರೆಡಿ ಫುಡ್’ನಲ್ಲಿ ದಿನಕ್ಕೆ 1.2 ಕೋಟಿ ರೂ. ವಹಿವಾಟು ನಡೆಸುವ ಮೂಲಕ ಜನರು ಆರೋಗ್ಯ ಕಳೆದುಕೊಳ್ಳುತ್ತಿದ್ದಾರೆ.

ಆರೋಗ್ಯ ಚೆನ್ನಾಗಿರಬೇಕೆಂದರೆ ಸಿರಿಧಾನ್ಯಗಳು, ಹಣ್ಣು, ತರಕಾರಿ, ತಾಟಿ ಬೆಲ್ಲ (ಕಪ್ಪು ಬೆಲ್ಲ), ಎತ್ತಿನ ಗಾಣದ ಎಣ್ಣೆ ಬಳಸಲು ಪ್ರಾರಂಭಿಸಬೇಕು. ಕುಕ್ಕರ್, ನಾನ್​ಸ್ಟಿಕ್, ಅಲ್ಯೂಮಿನಿಯಂ ಪಾತ್ರೆ ಬಿಟ್ಟು, ಮಣ್ಣಿನ ಮಡಕೆಗಳನ್ನು ಬಳಸಬೇಕು. ಸಿರಿಧಾನ್ಯದ ಅಂಬಲಿ ಸೇರಿದಂತೆ ಪಾರಂಪರಿಕ ಆಹಾರ ಪದ್ಧತಿ ಅನುಸರಿಸಬೇಕು. ಈ ಧಾನ್ಯಗಳು ಪೌಷ್ಟಿಕ ಮಾತ್ರವಲ್ಲ, ಪರಿಸರ ಕಾಪಾಡುವುದಕ್ಕೂ ಪೂರಕ.

ಮಣ್ಣಿನ ಫಲವತ್ತತೆ ರಕ್ಷಣೆ ಅಗತ್ಯ: ಮುಂದಿನ ಪೀಳಿಗೆಗಾಗಿ ಮಣ್ಣಿನ ಫಲವತ್ತತೆ ರಕ್ಷಣೆ ಮಾಡಬೇಕು ಎನ್ನುವುದು ನನ್ನ ಇನ್ನೊಂದು ಕನಸು. ಇದು ಸಾಧ್ಯವಾಗುವುದು ಸರಿಯಾದ ಕೃಷಿ ಪದ್ಧತಿಗಳ ಆಯ್ಕೆಯಿಂದ ಮಾತ್ರ ಸಾಧ್ಯ. ರೈತರು ಇಂದು ಆಯ್ಕೆ ಮಾಡಿಕೊಂಡಿರುವ ಬೆಳೆ ಮತ್ತು ಕೃಷಿ ಪದ್ಧತಿಗಳಿಂದ ನಮ್ಮ ಭೂಮಿ ಮುಂದಿನ ಮೂವತ್ತು ವರ್ಷಗಳಲ್ಲಿ ಬರಡು ಭೂಮಿಯಾಗಿ ಬದಲಾಗಲಿದೆ ಎನ್ನುವ ಆತಂಕವಿದೆ.

ಹೀಗಾಗಿ ಕಾಡು ಕೃಷಿಯತ್ತ ಮುಖ ಮಾಡಬೇಕು. ಇದಕ್ಕಾಗಿ ಎಚ್.ಡಿ. ಕೋಟೆ ಕಬಿನಿ ಹಿನ್ನೀರಿನ ಬಿದಿರೇನಹಳ್ಳಿಯಲ್ಲಿ ನಾನೇ 8 ಎಕರೆ ಬರಡು ಭೂಮಿ ಖರೀದಿಸಿ, ಕಾಡು ಚೈತನ್ಯ ದ್ರಾವಣ (ಸೂಕ್ಷ್ಮಾಣುಜೀವಿ ಸಹಿತ ದ್ರಾವಣ) ಬಳಸಿ ಸಿರಿಧಾನ್ಯಗಳೂ ಸೇರಿದಂತೆ 38 ಜಾತಿಯ ಬೆಳೆಗಳನ್ನು ಬೆಳೆಯುತ್ತಿದ್ದೇನೆ. ‘ಕಾಡು ಕೃಷಿ’ (ಜಂಗಲ್ ಅಗ್ರಿಕಲ್ಚರ್) ಎಂಬ ಪರಿಕಲ್ಪನೆ ಆರಂಭಿಸಿದ್ದೇನೆ.

ತೋಟದಲ್ಲಿ ಸರಿಯಾದ ಕೃಷಿ ವಿಧಾನಗಳ ನೇರ ಪ್ರಾತ್ಯಕ್ಷಿಕೆ ನೀಡುವ ಮೂಲಕ ಇತರ ರೈತರಿಗೆ ರಾಸಾಯನಿಕ, ಕ್ರಿಮಿನಾಶಮುಕ್ತ ಕೃಷಿ ಮಾಡುವ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ. ಸಾವಿರಾರು ಬರಡು ಭೂಮಿ ರೈತರನ್ನು ವರ್ಷಾಧಾರಿತ ಕೃಷಿಕರನ್ನಾಗಿ ಈ ಪ್ರಾತ್ಯಕ್ಷಿಕೆ ಮೂಲಕ ತಯಾರು ಮಾಡಲಾಗಿದೆ. ಇದರಿಂದ ರೈತರು ಸಂಪಾದನೆ ಮಾಡುತ್ತಿದ್ದು, ನಗರಗಳಿಗೆ ವಲಸೆ ಹೋಗುವುದು ತಪ್ಪುತ್ತಿದೆ.

ಪ್ರೇಮ ವಿವಾಹ: ಐಐಎಸ್​ಸಿಯಲ್ಲಿ ಪಿಎಚ್.ಡಿ ಮಾಡುತ್ತಿದ್ದಾಗ ಸಹಪಾಠಿಯಾಗಿದ್ದ ಉಷಾ ಅವರ ಪರಿಚಯವಾಗಿ ಪ್ರೇಮಕ್ಕೆ ತಿರುಗಿತು. ಎರಡೂ ಮನೆಯಲ್ಲಿಯೂ ಸಹಜವಾಗಿ ವಿರೋಧ ಬಂತು. ಆದರೂ ನಾವು ರಿಜಿಸ್ಟರ್ಡ್ ಮದುವೆಯಾಗಿ ಮೈಸೂರಿನಲ್ಲಿ ನೆಲೆಸಿದ್ದೇವೆ. ನಮಗೆ ಒಬ್ಬಳೇ ಮಗಳು ಡಾ. ಸರಳಾ. ಆಕೆ ಹೋಮಿಯೋಪತಿ ವೈದ್ಯೆಯಾಗಿದ್ದಾಳೆ. ಜತೆಗೆ ಸಿರಿಧಾನ್ಯ ಸೇರಿದಂತೆ ಆಹಾರ ಪದ್ಧತಿ ಕುರಿತು ಜಾಗೃತಿ ಮೂಡಿಸುತ್ತಿದ್ದಾಳೆ. ನೃತ್ಯಗಾರ್ತಿಯೂ ಆಗಿರುವ ಮಗಳು ಜೈನ ಸಮುದಾಯದವರನ್ನು ವಿವಾಹವಾಗಿದ್ದು, ಅಳಿಯ ಕುಶಾಲ್, ಪರಿಸರ ವಿಜ್ಞಾನ ಇಂಜಿನಿಯರ್ ಆಗಿ ‘ಗಾಣದ ಎಣ್ಣೆ’ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅಮೆರಿಕದಲ್ಲಿ ಇದ್ದಾಗ ನನ್ನ ಪತ್ನಿ ಗರ್ಭವತಿಯಾಗಿದ್ದಳು. ನನ್ನ ಮಗು ಭಾರತದಲ್ಲಿಯೇ ಹುಟ್ಟಬೇಕು ಎನ್ನುವ ಅಭಿಮಾನದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಬೆಂಗಳೂರಿಗೆ ಬಂದೆ. ನಮ್ಮ ಶ್ರೇಷ್ಠ ಕೆಲಸದಲ್ಲಿ ಈಗ ಪತ್ನಿ, ಮಗಳು, ಅಳಿಯ ಕೂಡ ಕೈಜೋಡಿಸಿದ್ದಾರೆ.

ನಿರೂಪಣೆ: ಆರ್.ಕೃಷ್ಣ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net