ತಾಯಂದಿರ ಬಗ್ಗೆ ಹೇಳಿಕೆ; ಕುಮಾರಸ್ವಾಮಿ ವಿಷಾದ

hddkk
Published on

ಬೆಂಗಳೂರು: ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ ನಾನು ವಿಷಾದಿಸುತ್ತೇನೆ. ಮಹಿಳೆಯರನ್ನು ಅಪಮಾನಿಸಿಲ್ಲ, ಅಂತಹ ಜಾಯಮಾನವೂ ನನ್ನದಲ್ಲ. ವಿಷಾದಿಸುವುದಕ್ಕೆ ನನಗೆ ಯಾವ ಪ್ರತಿಷ್ಠೆಯೂ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆ.ಪಿ.ಭವನದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾಡಿನ ಜನರನ್ನು ಮರಳು ಮಾಡುತ್ತಿರುವ ಐದು ಗ್ಯಾರಂಟಿಗಳ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್ ಮಹಿಳಾ ನಾಯಕಿಯರಿಗೆ ದುಃಖ ಆಗಿದ್ದರೆ ಅದಕ್ಕೂ ವಿಷಾದ ವ್ಯಕ್ತಪಡಿಸುತ್ತೇನೆ. ಯಾರಿಗೇ ದುಃಖ ಆಗಿದ್ದರೂ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಾನು ಇವರಂತೆ ಕೆನ್ನೆ ನೆಕ್ಕೋದು, ಹೆಣ್ಣು ಮಕ್ಕಳಿಗೆ ರೇಟ್ ಫಿಕ್ಸ್ ಮಾಡಿದ ರೀತಿ ನಾನು ಮಾತನಾಡಿಲ್ಲ. ನಾನು ತಪ್ಪು ಮಾಡಿಲ್ಲ. ಜನರಿಗೇ ನನ್ನ ಹೇಳಿಕೆಯನ್ನು ಬಿಡುತ್ತೇನೆ. ಅವರೇ ತೀರ್ಮಾನ ಮಾಡಲಿ ಎಂದು ಹೇಳಿದರು.

ತಾಯಂದಿರಿಗೆ ಅಪಮಾನ ಮಾಡಿದ್ದಾರೆ. ಅವರು ಕ್ಷಮೆಗೆ ಅರ್ಹರಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ವಾಯುವೇಗದಲ್ಲಿ ತಮ್ಮ ಶಾಸಕರು, ಮಾಜಿ ಶಾಸಕರು, ಮಹಿಳಾ ಘಟಕದವರ ಜತೆ ಝೂಮ್ ಮೀಟಿಂಗ್ ಮಾಡಿದ್ದಾರೆ. ಇಂದಿರಾ ಗಾಂಧಿ ಅವರು ಹತ್ಯೆಯಾದ ಸಮಯದಲ್ಲಿ ದುಃಖಪಟ್ಟಿದ್ದು ಬಿಟ್ಟರೆ ಅಷ್ಟು ದುಃಖಪಟ್ಟಿದ್ದು ಈ ದಿನವೇ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ಗೆ ಟಾಂಗ್ ಕೊಟ್ಟರು.

ಕಿಡ್ನಾಪ್ ಮಾಡಿ ಬೇಲಿ ಹಾಕಿರಲಿಲ್ಲವೆ?

ಕೆಲ ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ ಅವರ ಅಪ್ಪ ಅಮ್ಮನಿಂದ ಜಮೀನು ಬರೆಸಿಕೊಂಡಾಗ ನಿಮಗೆ ದುಃಖ ಆಗಲಿಲ್ಲವೇ? ಪಾಪ.. ಇದೆಲ್ಲವನ್ನು ನಾನು ಕಂಡಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

2006-07 ಸಾರಾಯಿ ನಿಷೇಧ ಮಾಡಿದ್ದು ನಾನು. ಲಾಟರಿ ನಿಷೇಧ ಮಾಡಿದೆ. ನಿಷೇಧ ಮಾಡಬಾರದು ಎಂದು ನನಗೆ ಸಾವಿರಾರು ಕೋಟಿ ರೂಪಾಯಿ ಆಮಿಷ ಒಡ್ಡಿದರು. ಅದನ್ನೆಲ್ಲ ಕಾಲಲ್ಲಿ ಒದ್ದು ಸಾರಾಯಿ ನಿಷೇಧ ಮಾಡಿದ್ದೆ. ಎಲ್ಲೇ ಹೋದರೂ ತಾಯಂದಿರು ನನ್ನ ಬಳಿ ಬಂದು ಸಾರಾಯಿ, ಲಾಟರಿ ನಿಷೇಧ ಮಾಡಿ ಎಂದು ಕಣ್ಣೀರು ಹಾಕುತ್ತಿದ್ದರು. ಅವರಿಗಾಗಿ ಬೊಕ್ಕಸಕ್ಕೆ ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ರಿಸ್ಕ್ ತೆಗೆದುಕೊಂಡು ನಿಷೇಧ ಮಾಡಿದೆ ಎಂದು ಹೇಳಿದರು. ಕಾಂಗ್ರೆಸ್‌ನವರಿಗೆ ನನ್ನ ಬಗ್ಗೆ ಮಾತಾಡುವುದಕ್ಕೆ ವಿಷಯ ಇಲ್ಲ. ಅದಕ್ಕೆ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ನಿಮ್ಮ ಪಕ್ಷದ ಉಸ್ತುವಾರಿ ಸುರ್ಜೆವಾಲಾ ಸಂಸದರಾದ ಹೇಮಮಾಲಿನಿ ಅವರ ಬಗ್ಗೆ ಏನು ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ನಿಮಗೆ ಗೊತ್ತಿಲ್ಲವೇ? ಮಹಿಳೆಯರಿಗೆ ಗೌರವ ಕೊಡುವ ರೀತಿ ಇದೇನಾ? ನೀವು ದೇಶದ ಮಹಿಳೆಯರನ್ನು ರಕ್ಷಣೆ ಮಾಡೋರು ಅಲ್ಲವೇ? ಎಂದು ಡಿಕೆಶಿಗೆ ವಿರುದ್ಧ ಪ್ರಹಾರ ನಡೆಸಿದರು.

ಕಂಗನಾ ಬಗ್ಗೆ ಏನು ಬರೆದಿದ್ದರು

ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನಟಿ ಕಂಗನಾ ರಣಾವತ್ ಬಗ್ಗೆ ಇವರ ಪಕ್ಷದ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಏನು ಬರೆದಿದ್ದರು? ಅಲ್ಲಿ ರೇಟ್ ಫಿಕ್ಸ್ ಮಾಡಿದಿರಿ ನೀವು. ಇದಕ್ಕೆ ಉತ್ತರ ಹೇಳಿ? ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂಥ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಏನು ಹೇಳುತ್ತಾರೆ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದು ನಿಮಗೆ ನೆನಪಿಲ್ಲವೆ? ಆನಂದ ಪಡೆಯಿರಿ ಅಂತ ಹೇಳಿದ್ದರು ಅಲ್ಲವಾ? ಎಂದು ಕುಟುಕಿದರು.

ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಎನ್ನುತ್ತೀರಿ. 2018ರಲ್ಲಿ ನಮ್ಮ ಮನೆಗೆ ನೀವು ಬಂದಾಗ ನೀವು ನಾಯಿ ಸ್ಥಾನದಲ್ಲಿ ಇದ್ದೀರಾ? ಅಥವಾ ಹಳಸಿದ ಅನ್ನದ ಸ್ಥಾನದಲ್ಲಿ ಇದ್ದೀರಾ? ಅನ್ನಕ್ಕೆ ನಾನಂತೂ ಅಪಮಾನ ಮಾಡುವುದಿಲ್ಲ ಎಂದು ಛೇಡಿಸಿದರು.

ಮಹಿಳಾ ಆಯೋಗ ದೂರು ದಾಖಲು ಮಾಡಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಮಹಿಳಾ ಆಯೋಗ ನೊಟೀಸ್ ಕೊಡಲಿ ಉತ್ತರ ಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಡಿಕೆಶಿ ಬೆದರಿಕೆ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹೊಸ ಅಪಾರ್ಟ್‌ಮೆಂಟ್ ಅಕ್ಯೂಪೆನ್ಸಿ ಸರ್ಟಿಫಿಕೇಟ್ ಬೇಕಾದರೆ, ಎನ್‌ಒಸಿ ಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ವೋಟು ಕೊಟ್ಟರೆ ಕಾವೇರಿ ನೀರು ಬಿಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

ನನಗೆ ಇರುವುದು ಬಿಡದಿ ಬಳಿ ಜಮೀನು ಮಾತ್ರ...

ಬೆಂಗಳೂರಿನ ಸುತ್ತಮುತ್ತ 1000 ಎಕರೆ ಕುಮಾರಸ್ವಾಮಿಗೆ ಜಮೀನು ಇದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ, ನನ್ನದು ಬಿಡದಿಯ ಬಳಿ 45-48 ಎಕರೆ ಭೂಮಿ ಇದೆ. ಸಿನಿಮಾದಲ್ಲಿ ದುಡಿದ ದುಡ್ಡಿನಲ್ಲಿ ಅದನ್ನು ಖರೀದಿ ಮಾಡಿದ್ದು. ಆದರೆ, ನೀವು ಮಾಡಿದ್ದು ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸುವುದು ಎಂದು ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net