

ಬೆಂಗಳೂರು: ಗಾಂಧಿ ಆದರ್ಶಗಳನ್ನು ಅನುಸರಿಸುವುದು ಎಂದರೆ ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನ ಲೂಟಿ ಮಾಡುವುದಾ? ಅಥವಾ ಸೂರಿಲ್ಲದ ಜನಸಾಮಾನ್ಯರು ಸೂರು ಕಟ್ಟಿಕೊಳ್ಳಲು ಸಿಗಬೇಕಾಗಿದ್ದ ಮೂಡಾ ಸೈಟುಗಳನ್ನು ಲಪಟಾಯಿಸುವುದಾ? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಗಿ ಕೇಳಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವುದು ಎಂದರೆ ಗಾಂಧೀಜಿ ಅವರು ತಂದುಕೊಟ್ಟ ಸ್ವಾತಂತ್ರ್ಯ ಬಳಸಿಕೊಂಡು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಳ್ಳುವುದಾ? ಅಥವಾ ಗೋಮಾತೆಯ ಕೆಚ್ಚಲು ಕತ್ತರಿಸಿದರೂ ಮೌನ ವಹಿಸುವುದಾ? ಎಂದು ಪ್ರಶ್ನಿಸಿದ್ದಾರೆ.
ಗಾಂಧಿ ಕನಸನ್ನು ನನಸಾಗಿಸುವುದು ಎಂದರೆ ನಕಲಿ ಗಾಂಧಿಗಳ ಕೈಗೆ ಕಾಂಗ್ರೆಸ್ ಪಕ್ಷವನ್ನು ಕೊಟ್ಟು ಗುಮಲಾಗಿರಿ ಮಾಡುವುದಾ? ಅಥವಾ ಸ್ವತಂತ್ರ ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿ ಇಡೀ ದೇಶವನ್ನೇ ಜೈಲು ಮಾಡುವುದಾ? ಎಂದು ಕೇಳಿದ್ದಾರೆ.
ಬಹುಶಃ ಇದನ್ನೆಲ್ಲಾ ಮುಂದಾಲೋಚನೆ ಮಾಡಿಯೇ ಗಾಂಧೀಜಿ ಅವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನ ವಿಸರ್ಜನೆ ಮಾಡಬೇಕು ಎಂದು ಹೇಳಿದ್ದರು ಅನ್ನಿಸುತ್ತದೆ.
ಈಗಿರುವ ನಕಲಿ ಗಾಂಧಿಗಳು ಎಷ್ಟು ಡೋಂಗಿ ಗಾಂಧಿವಾಗಿದಳೋ ಅಧಿಕಾರಕ್ಕಾಗಿ ಅವರ ಗುಲಾಮಗಿರಿ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಅವರಿಗಿಂತ ಹೆಚ್ಚು ಡೋಂಗಿಗಳು ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.