

ಸೊರಬ: ಗಣೇಶ ಹಬ್ಬದಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಸರ್ಕಾರದ ನಿಯಮಗಳನ್ನು ಗಣೇಶ ಪ್ರತಿಷ್ಠಾಪನಾ ಸಮಿತಿಗಳು, ಯುವಕ ಸಂಘಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಆನವಟ್ಟಿ ಪಿಎಸ್‌ಐ ಚಂದನ್ ಚಲುವಯ್ಯ ತಿಳಿಸಿದರು.
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ನಡೆದ ಗಣೇಶ ಪ್ರತಿಷ್ಠಾಪನಾ ಆಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ಗಣೇಶನ ವಿಗ್ರಹವನ್ನು ಎಲ್ಲಿಂದ, ಹೇಗೆ ತರಲಾಗುತ್ತಿದೆ. ಮೂರ್ತಿಯ ಎತ್ತರ, ವಿಸರ್ಜನೆ ಮಾಡುವ ವಿವರವನ್ನು ಮುಂಚಿತವಾಗಿ ತಿಳಿಸಬೇಕು. ಪ್ರತಿಷ್ಠಾಪನೆ ಮಂಡಳಿಯ ಹೆಸರು, ಎಷ್ಟು ದಿನ ಕೂರಿಸುತ್ತಾರೆ, ಮಂಡಳಿಯ ಸದಸ್ಯರ ಹೆಸರು, ಆಧಾರ್ ಕಾರ್ಡ್ ಮತ್ತು ೆನ್ ನಂಬರ್ ನೀಡಬೇಕು ಎಂದರು.
ಮೂರ್ತಿ ಪ್ರತಿಷ್ಠಾಪನೆ ಸ್ಥಳದ ಹೆಸರು, ವಿವರ ಪಡೆದು ಪರಿಶೀಲಿಸಬೇಕು. ಖಾಸಗಿ ಜಾಗವಾಗಿದ್ದಲ್ಲಿ ಜಾಗದ ಮಾಲೀಕರ ಅನುಮತಿ, ಸರ್ಕಾರಿ ಜಾಗವಾಗಿದ್ದಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಆಡಳಿತದಿಂದ ಅನುಮತಿ ಪತ್ರ ಪಡೆಯಬೇಕು. ವಿದ್ಯುತ್‌ಗಾಗಿ ಮೆಸ್ಕಾಂನಿಂದ ಅನುಮತಿ ಪಡೆದು ಪತ್ರ ಹಾಜರುಪಡಿಸುವುದು. ಅತಿ ಹೆಚ್ಚು ಶಬ್ಧ ಮಾಡುವಂತಹ ಯಾವುದೇ ಸಂಗೀತ ಸಾಧನಗಳನ್ನು ಬಳಸುವಂತಿಲ್ಲ. ಪ್ರತಿಷ್ಠಾಪನ ದಿನದಿಂದ ವಿಸರ್ಜನೆವರೆಗೆ ನಡೆಸುವ ಕಾರ್ಯಕ್ರಮಗಳ ವಿವರವನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಹೇಳಿದರು.
ಪ್ರಸಾದ ವಿತರಣೆ ಮಾಡುವಾಗ ಸ್ವಚ್ಛತೆ, ಸುರಕ್ಷತೆಗೆ ಆದ್ಯತೆ ನೀಡಬೇಕು. ಪೆಂಡಾಲ್ ಬಳಿ ಸಮಿತಿ ಪದಾಧಿಕಾರಿಗಳು ಹಾಜರಿರಬೇಕು. ಮಂಟಪದ ಒಳಗೆ ದೀಪ ಇಡುವ ಸ್ಥಳ ಸುರಕ್ಷಿತವಾಗಿರಬೇಕು. ಬೆಂಕಿ ನಂದಿಸಲು ಮರಳು, ನೀರು ತುಂಬಿದ ಬಕೇಟ್‌ಗಳನ್ನು ಇಡಬೇಕು. ಪ್ರತಿಷ್ಠಾಪನಾ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ವಿವಾದಿತ ಘೋಷಣೆ ಕೂಗುವುದು ಹಾಗೂ ಹಾಡುಗಳನ್ನು ಹಾಡುವಂತಿಲ್ಲ. ವಿವಾದಾತ್ಮಕ ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವಂತಿಲ್ಲ. ಗಣೇಶ ಮಂಟಪ ಸಮೀಪ ಯಾವುದೇ ಸಣ್ಣಪುಟ್ಟ ಜಗಳವಾದರೂ ಕೂಡಲೇ ಸರಹದ್ದಿನ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದರು.
ವಿಸರ್ಜನೆ ಸಂದರ್ಭ ಅವಶ್ಯಕತೆ ಇದ್ದರೆ ಈಜುಗಾರರು ಮಾತ್ರ ನೀರಿನಲ್ಲಿ ಇಳಿಯಬೇಕು. ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಸಂದರ್ಭದಲ್ಲಿ ಸೇರುವ ಜನರ ಪ್ರಮಾಣದ ಅಂದಾಜು ಮಾಹಿತಿಯನ್ನು ತಿಳಿಸಬೇಕು. ಕಡ್ಡಾಯವಾಗಿ ರಾತ್ರಿ 10 ಗಂಟೆಗೆ ಎಲ್ಲ ಸೌಂಡ್ ಸಿಸ್ಟಮ್ ಬಂದ್ ಮಾಡಬೇಕು ಎಂದು ಸೂಚಿಸಿದರು.
ಮುಖಂಡರಾದ ಮಧುಕೇಶ್ವರ್ ಪಾಟೀಲ್, ಉಮೇಶ್ ಉಡಗಣಿ, ಹರೀಶ್, ರಮೇಶ್, ಶಿವರಾಜ್, ಚೇತನ್, ಇಮ್ತಿಯಾಜ್, ಆದಿ, ಪೊಲೀಸ್ ಸಿಬ್ಬಂದಿ ಇದ್ದರು.