ಬದುಕು-ಬವಣೆಗಳ ಹೂರಣ ಜಾನಪದ ಸಾಹಿತ್ಯ

bdvt (5)
ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನದಲ್ಲಿ ಕಲಾವಿದರಾದ ಲಕ್ಷ್ಮಮ್ಮ, ಭಾಗ್ಯಾಬಾಯಿ, ವೆಂಕಟರಮಣ, ಕಣ್ಣನ್, ಜಂಬೂಸ್ವಾಮಿ, ಶಿವಾಜಿ ರಾವ್, ಹನುಮಂತ ರಾವ್ ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುಗಧರ್ಮ ರಾಮಣ್ಣ, ಲಕ್ಷ್ಮಣ್‌ರಾವ್ ಬೋರಾತ್, ಡಿ.ಮಂಜುನಾಥ್ ಇತರರಿದ್ದರು.
Published on

ಭದ್ರಾವತಿ: ಬದುಕಿನಲ್ಲಿ ಅನುಭವಿಸುವ ನೋವು-ನಲಿವು, ನಡೆ-ನುಡಿ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ಬದುಕು-ಬವಣೆಗಳ ಸಾಹಿತ್ಯವೇ ಜಾನಪದ ಎಂದು ಜಾನಪದ ಗಾಯಕ ಯುಗಧರ್ಮ ರಾಮಣ್ಣ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ, ಹಿರಿಯೂರು ಹೋಬಳಿ ಘಟಕ ನೇತೃತ್ವದಲ್ಲಿ ಭಾನುವಾರ ತಾಲೂಕಿನ ಗೊಂದಿ ಗ್ರಾಮದ ಶ್ರೀ ಪಾಂಡುರಂಗ ಸಾಧಕಾಶ್ರಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜಾನಪದ ಸಮ್ಮೇಳನ ಹಾಗೂ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆ ಹುಟ್ಟಿನಿಂದ ಸಾವಿನವರೆಗೂ ಜತೆ ಜತೆಗೆ ಬಂದಿದೆ. ನಮಗೆ ಸಾವಿದೆ, ಆದರೆ ಜಾನಪದಕ್ಕೆ ಸಾವಿಲ್ಲ. ಈ ಭೂಮಿ ಮೇಲೆ ಎಂದಿಗೂ ಶಾಶ್ವತವಾಗಿ ಉಳಿಯಲಿದೆ. ಇಂತಹ ಕಲೆಗಳನ್ನು ಮೈಗೂಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಕಲಾವಿದರಾದ ಲಕ್ಷ್ಮಮ್ಮ(ಸೋಬಾನೆ ಪದ), ಭಾಗ್ಯಾಬಾಯಿ(ಲಂಬಾಣಿ ನೃತ್ಯ), ವೆಂಕಟರಮಣ(ತಮಟೆ ವಾದನ), ಕಣ್ಣನ್(ಭಜನೆ ಪದ), ಜಂಬೂಸ್ವಾಮಿ (ಜಾನಪದ ಗಾಯನ), ಶಿವಾಜಿ ರಾವ್(ಡೊಳ್ಳು ಕುಣಿತ), ಹನುಮಂತ ರಾವ್(ರಂಗಕಲೆ) ಅವರಿಗೆ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೊಂದಿ ಶ್ರೀ ಪಾಂಡುರಂಗ ಸಾಧಕಾಶ್ರಮದ ಮಾತಾ ಮುಕ್ತಾನಂದಮಯಿ ಸಾನ್ನಿಧ್ಯವಹಿಸಿದ್ದರು. ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್.ರೇವಣಪ್ಪ, ಪರಿಷತ್ ಹಿರಿಯೂರು ಹೋಬಳಿ ಘಟಕ ಅಧ್ಯಕ್ಷ ಜಯರಾಂ ಗೊಂದಿ, ಉದ್ಯಮಿ ಬಿ.ಕೆ ಜಗನ್ನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ, ಬಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಅರಳಿಕೊಪ್ಪ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಬಿ.ಸುರೇಶ್, ಎಸ್.ರಾಜು, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಎಂ.ಎಸ್.ಸುಧಾಮಣಿ ಇತರರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಗ್ರಾಮದಲ್ಲಿ ಜಾನಪದ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net