ಉತ್ತಮ ಭವಿಷ್ಯಕ್ಕಾಗಿ ಓದಿನ ಕಡೆ ಗಮನಹರಿಸಿ

sor
ಸೊರಬದಲ್ಲಿ ಎಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್‌ನಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಹರಿಪ್ರಸಾದ್ ರೈ, ಸಿ.ಕೆ.ಬಲೀಂದ್ರಪ್ಪ, ಡಿ.ಎಸ್.ಶಂಕರ್ ಶೇಟ್, ಎಂ.ಮೇಘಶ್ರೀ ಇತರರಿದ್ದರು.
Published on

ಸೊರಬ: ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣದ ಅವಧಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಅಧ್ಯಯನದ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಎಚ್‌ಪಿಆರ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಸಂಸ್ಥೆ ಅಧ್ಯಕ್ಷ ಹರಿಪ್ರಸಾದ್ ರೈ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳ ದೀಪ ಬೆಳಗಿಸುವುದು ಮತ್ತು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಮೂಲಕ ಸಂಸ್ಥೆಗೆ ಮತ್ತು ಪಾಲಕರಿಗೆ ಕೀರ್ತಿ ತರಬೇಕು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಮುಂದಿನ ಮೂರು ವರ್ಷ ಶಿಕ್ಷಣದ ಕಡೆ ಮನಸ್ಸನ್ನು ಕೇಂದ್ರೀಕರಿಸಬೇಕು. ನರ್ಸಿಂಗ್ ಶಿಕ್ಷಣ ಪಡೆದವರಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ತಮ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಂತ ವೈದ್ಯ ಎಚ್.ಇ.ಜ್ಞಾನೇಶ್ ಮಾತನಾಡಿ, ಭವ್ಯ ಭಾರತದ ನಿರ್ಮಾಣದಲ್ಲಿ ದಾದಿಯರ ಪಾತ್ರ ಮಹತ್ವದಾಗಿದೆ. ಅವರ ಸೇವೆ ಶ್ರೇಷ್ಟವಾದುದು. ರೋಗಿಗಳ ನೋವುಗಳಲ್ಲಿ ಭಾಗಿಯಾಗಿ ಕೆಲಸ ಮಾಡುತ್ತಾರೆ. ನರ್ಸಿಂಗ್ ಇಲ್ಲದೆ ವೈದ್ಯಕೀಯ ಸೇವೆ ದೊರೆಯುವುದು ಕಷ್ಟಕರ. ವಿದ್ಯಾರ್ಥಿಗಳು ಓದುವಾಗಲೇ ಗುಣಮಟ್ಟದ ಸೇವೆ ನೀಡುವುದನ್ನು ಕಲಿತಾಗ ಬದುಕು ಸುಲಭವಾಗಿ ರೂಪಿತವಾಗುತ್ತದೆ ಎಂದು ಹೇಳಿದರು.

ಟಿಎಚ್‌ಒ ಡಾ. ನೂತನ ನಾಯ್ಕ, ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳಾದ ಅನಿತಾ ಕುಮಾರಿ, ರೋಹಿಣಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಎಸ್.ನಾಗರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪ್ರಭು ಕೆ. ಸಾಹುಕಾರ್, ಕರವೇ ಅಧ್ಯಕ್ಷ ಸಿ.ಕೆ.ಬಲೀಂದ್ರಪ್ಪ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್, ಎಚ್‌ಪಿಆರ್ ಸಂಸ್ಥೆ ಆಡಳಿತಾಧಿಕಾರಿ ಶಿವಾನಂದ ನಾಯ್ಕ, ಪ್ರಾಚಾರ್ಯೆ ಎಂ.ಮೇಘಶ್ರೀ, ಸಾರ್ವಜನಿಕ ಆಸ್ಪತ್ರೆ ನರ್ಸಿಂಗ್ ಸೂಪರಿಂಟೆಂಡೆಂಟ್ ಗ್ರೇಡ್-2 ಎಚ್.ಆರ್.ಸರೋಜಾದೇವಿ, ನರ್ಸಿಂಗ್ ಅಧಿಕಾರಿಗಳಾದ ಶಿಲ್ಪಾ ಎಂ. ಬೋರ್ಕರ್, ಎಚ್.ಕೆ.ಜ್ಯೋತಿ, ಜಿ.ಭಾಗ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net