ಗಿಡಮೂಲಿಕೆ ಸತ್ವಭರಿತ ಔಷಧ ಸಂಶೋಧನೆಯತ್ತ ಚಿತ್ತ

confference
ಕುವೆಂಪು ವಿವಿಯಲ್ಲಿ ಆಯೋಜಿಸಿರುವ ನೋನಿಯ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯದ ಸುಸ್ಥಿರ ಬಳಕೆ ಕುರಿತ ಸಮ್ಮೇಳನವನ್ನು ಹೈದರಾಬಾದ್ ಕೇಂದ್ರೀಯ ವಿವಿ ವಿಶ್ರಾಂತ ಕುಲಪತಿ ಪ್ರೊ. ಅಪ್ಪಾರಾವ್ ಪೋಡಿಲೆ ಉದ್ಘಾಟಿಸಿದರು. ಪ್ರೊ. ಶರತ್ ಅನಂತಮೂರ್ತಿ, ಪ್ರೊ.ಆರ್.ಸಿ.ಜಗದೀಶ್, ಡಾ. ಎ.ಕೆ.ಶ್ರೀನಿವಾಸಮೂರ್ತಿ ಇತರರಿದ್ದರು.
Published on

ಶಿವಮೊಗ್ಗ: ಗಿಡಮೂಲಿಕೆಗಳನ್ನು ಆಧರಿಸಿದ ಔಷಧ ಉತ್ಪನ್ನಗಳು ಆರೋಗ್ಯಕರ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಭವಿಷ್ಯದಲ್ಲಿ ಇತರ ಔಷಧ ವಿಧಾನಗಳಿಗೆ ಪರ್ಯಾಯವಾಗಲಿದೆ ಎಂದು ಥಾಯ್ಲೆಂಡ್‌ನ ಚುಲಾಲೊಂಗೋಂ ವಿವಿಯ ಔಷಧ ಶಾಸ್ತ್ರ ವಿಭಾಗದ ನಿರ್ದೇಶಕಿ ಪ್ರೊ. ಸುಕಾಡಾ ಸುಕ್ರೋಂಗ್ ಹೇಳಿದರು.

ಕುವೆಂಪು ವಿವಿಯಲ್ಲಿ ನೋನಿ ಸಂಶೋಧನಾ ಪ್ರವೃತ್ತಿಗಳು ಮತ್ತು ಆರೋಗ್ಯಕರ ಬದುಕಿಗೆ ಜೀವವೈವಿಧ್ಯದ ಸುಸ್ಥಿರ ಬಳಕೆ ವಿಷಯ ಕುರಿತು ಗುರುವಾರ ಆರಂಭವಾದ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಜಗತ್ತಿನಾದ್ಯಂತ ಸಿಂಥೆಟಿಕ್ ಔಷಧ ಉತ್ಪನ್ನಗಳನ್ನು ತಯಾರಿಸುತ್ತಿರುವ ಫಾರ್ಮಾ ಕಂಪನಿಗಳು ಗಿಡಮೂಲಿಕೆಗಳ ಸತ್ವವನ್ನು ಒಳಗೊಂಡ ಮತ್ತು ಅಡ್ಡ ಪರಿಣಾಮಗಳಿಲ್ಲದ ಸುಸ್ಥಿರ ಔಷಧ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿವೆ ಎಂದು ತಿಳಿಸಿದರು.

ಚೀನಾದ ವಿದ್ಯುನ್ಮಾನ ಮತ್ತು ಜೀವವಿಜ್ಞಾನಗಳ ವಿವಿ ಪ್ರಾಧ್ಯಾಪಕ ಪ್ರೊ. ಸಜೀವಾ ಮಹಾಚಿಗುಂಬುರ ಮಾತನಾಡಿ, ಆಧುನಿಕ ವಿಜ್ಞಾನ ಕೂಡ ಆಯುರ್ವೇದ ಮತ್ತು ಸಾವಯವ ಗಿಡಮೂಲಿಕೆಗಳ ಮಹತ್ವವನ್ನು ಅರಿತಿದ್ದು, ವಿವಿಧ ಜಾಗತಿಕ ಸಂಸ್ಥೆಗಳು ನೋನಿ ಗಿಡಮೂಲಿಕೆಗಳನ್ನು ಬಳಸಿಕೊಂಡು ವಿವಿಧ ರೋಗಗಳಿಗೆ ಪರಿಹಾರ ಹುಡುಕುತ್ತಿವೆ ಎಂದರು.

ಕುವೆಂಪು ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ. ವಿ.ಕೃಷ್ಣ ಅವರ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿರುವ ಆ್ಯಂಟಿ ಏಜಿಂಗ್ ಕ್ರೀಂಅನ್ನು ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆ ಸಹಯೋಗದಲ್ಲಿ ಬಿಡುಗಡೆ ಮಾಡಲಾಯಿತು. ಸ್ಥಳೀಯ ರೈತರಿಗೆ ಸಹಕಾರಿ ಆಗಲೆಂದು ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ. ಜೆ.ನಾರಾಯಣ ಅವರು ಅಭಿವೃದ್ಧಿಪಡಿಸಿರುವ ಸಾವಯವ ಗೊಬ್ಬರ ಬಿಡುಗಡೆ ಮಾಡಲಾಯಿತು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಪ್ರೊ. ಆರ್.ಸಿ.ಜಗದೀಶ್, ಕುವೆಂಪು ವಿವಿ ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ವ್ಯಾಲ್ಯೂ ಪ್ರಾಡಕ್ಟ್ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಕೆ.ಶ್ರೀನಿವಾಸಮೂರ್ತಿ, ಪ್ರೊ. ಬಿ.ತಿಪ್ಪೇಸ್ವಾಮಿ, ಡಾ. ಎಚ್.ಎಸ್.ಸಂತೋಷ್‌ಕುಮಾರ್, ಪ್ರೊ. ವಿಜಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net