

ಫ್ಲೊರಿಡಾ: ಫ್ಲೊರಿಡಾದ ಕೋರ್ಟ್ ಆವರಣದಲ್ಲಿ ನಿನ್ನೆ ಏಕಾಏಕಿ ಜಮಾಯಿಸಿದ ಕೆಲವು ಯುವಕ- ಯುವತಿಯರು ಇದ್ದಕ್ಕಿದ್ದಂತೆಯೇ ವ್ಯಾಯಾಮದಲ್ಲಿ ತೊಡಗಿಸಿಕೊಂಡರು. ಅಲ್ಲಿದ್ದವರಿಗೆ ಅಚ್ಚರಿಯೋ ಅಚ್ಚರಿ.
ನಮನಮೂನೆಯ ವ್ಯಾಯಾಮ, ಜಿಮ್ನಾಸ್ಟಿಕ್ ಎಲ್ಲವೂ ಅಲ್ಲಿ ನಡೆದವು. ಕೋರ್ಟ್ಗೆ ನ್ಯಾಯಮೂರ್ತಿಗಳು ಬರುತ್ತಿದ್ದಂತೆಯೇ ಇವರ ಎಕ್ಸಸೈಸ್ ಇನ್ನೂ ಜೋರಾಯಿತು.
ಇದನ್ನೂ ಓದಿ: ಕಂಟೈನ್ಮೆಂಟ್ ಝೋನ್ನಿಂದಲೇ ಕೇಕೇ ಹಾಕುತ್ತಿದೆ ಕರೊನಾ!
ಅಷ್ಟಕ್ಕೂ ಇವರೆಲ್ಲಾ ಹೀಗೆ ಏಕಾಏಕಿ ಕೋರ್ಟ್ ಆರಣದ ಮುಂದೆ ದಾಳಿ ನಡೆಸಿರುವುದಕ್ಕೆ ಕಾರಣ, ಅಲ್ಲಿಯ ಫಿಟ್ನೆಸ್ ಕೇಂದ್ರಗಳನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ಮುಚ್ಚಿರುವುದು! ಹೌದು. ಲಾಕ್ಡೌನ್ ಹಿನ್ನೆಲೆಯಲ್ಲಿ ಕರೊನಾ ವೈರಸ್ ಸೋಂಕು ಶೀಘ್ರದಲ್ಲಿ ಹರಡುವಲ್ಲಿ ಇಂಥ ಕೇಂದ್ರಗಳದ್ದು ದೊಡ್ಡ ಪಾಲು ಇದೆ ಎಂಬ ಕಾರಣಕ್ಕೆ ಎಲ್ಲಾ ಕಡೆಗಳಂತೆ ಅಮೆಕದಾದ್ಯಂತ ಫಿಟ್ನೆಟ್ ಕೇಂದ್ರ, ಜಿಮ್ನಾಸ್ಟಿಕ್ ಕೇಂದ್ರಗಳನ್ನು ಮುಚ್ಚಲಾಗಿದೆ.
ಕಳೆದ ವಾರ ಇದನ್ನು ತೆರೆಯುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ ಕರೊನಾ ವೈರಸ್ ಹರಡುವಿಕೆ ಇನ್ನಷ್ಟು ಭೀಕರ ಆಗಿರುವ ಹಿನ್ನೆಲೆಯಲ್ಲಿ ಇದನ್ನು ತೆರೆಯಬಾರದು ಎಂದು ಆದೇಶಿಸಲಾಗಿದೆ.
ಇದರಿಂದ ಹಲವಾರು ಉದ್ಯೋಗಿಗಳಿಗೆ ಚಿಂತೆ ಕಾಡಿದೆ. ಹಲವು ವಾರ ಕಳೆದರೂ ಫಿಟ್ನೆಸ್ ಕೇಂದ್ರ ತೆರೆಯದ್ದರಿಂದ ತಾಳ್ಮೆ ಕಳೆದುಕೊಂಡ ಫಿಟ್ನೆಸ್ ಉತ್ಸಾಹಿಗಳು ಬೀದಿಗಿಳಿದು ಪ್ರತಿಭಟಿಸಿದ್ದೂ ಆಯ್ತು. ಫಿಟ್ನೆಸ್ ಕೇಂದ್ರ ತೆರೆಯುವಂತೆ ಬ್ಯಾನರ್, ಫಲಕ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು ಆದರೆ ಅದಕ್ಕೆ ಸರ್ಕಾರ ಹೆಚ್ಚಿನ ತಲೆ ಕೆಡಿಸಿಕೊಳ್ಳದ ಕಾರಣ, ಕೋರ್ಟ್ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದರು.
ಸುಮ್ಮನೆ ಘೋಷಣೆ ಕೂಗಿದರೆ ಪ್ರಯೋಜನ ಇಲ್ಲ ಎಂದುಕೊಂಡು ಘೋಷಣೆ ಜತೆ, ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಈ ಪ್ರತಿಭಟನೆಗಾದರೂ ಸರ್ಕಾರ ಜಗ್ಗಲಿ, ತಮ್ಮ ಗೋಳು ಆಲಿಸಲಿ ಎನ್ನುವುದು ಇವರ ಅಂಬೋಣ. ಇದರ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. (ಏಜೆನ್ಸೀಸ್)