

ಫ್ಲೋರಿಡಾ: ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಆಹಾರವನ್ನು ಮನೆಯ ಬಾಗಿಲ ಮುಂದಿಟ್ಟ ಫುಡ್ ಡೆಲಿವರಿ ವ್ಯಕ್ತಿ, ಪಾವತಿ ಮತ್ತು ತನ್ನ ಟಿಪ್ಗಾಗಿ ಕಾಯುತ್ತಿದ್ದರು. ಈ ವೇಳೆ ಆನ್ಲೈನ್ ಮೂಲಕ ಬಂದ ಹಣದ ಜತೆಗೆ ಕಡಿಮೆ ಟಿಪ್ ಕೊಟ್ಟರು ಎಂಬ ಬೇಸರಕ್ಕೊಳಗಾದ ವ್ಯಕ್ತಿ, ತಂದಿದ್ದ ಆಹಾರದ ಮೇಲೆ ಉಗುಳಿದ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಫ್ಲೋರಿಡಾದ, ಡೇಡ್ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. 13 ವರ್ಷದ ಬಾಲಕನೊಬ್ಬ ಮಾಡಿದ್ದ ಫುಡ್ ಆರ್ಡರ್ ಅನ್ನು ಡೆಲಿವರಿ ಮಾಡಿದ ವ್ಯಕ್ತಿಯ ಅಸಭ್ಯ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ: ಬಾಲಕ ಮಾಡಿದ್ದ ಆರ್ಡರ್ ಅನ್ನು ಆತನ ಮನೆಯ ಬಾಗಿಲ ಮುಂದಿರಿಸಿದ ಡೆಲಿವರಿ ವ್ಯಕ್ತಿ, ಪಾವತಿ ಮತ್ತು ಟಿಪ್ಗಾಗಿ ಕೆಲ ಸಮಯ ಮನೆ ಮುಂದೆ ನಿಂತಿದ್ದಾರೆ. 30 USD ಹಣವನ್ನು ಪಾವತಿ ಮಾಡಿದ ಹುಡುಗ, 3 USD ಅನ್ನು ಟಿಪ್ ಆಗಿ ನೀಡಿದ್ದಾರೆ. ಇದನ್ನು ನೋಡಿ ಅಸಮಾಧಾನಗೊಂಡ ವ್ಯಕ್ತಿ, ತಂದಿದ್ದ ಆಹಾರದ ಮೇಲೆ ಉಗುಳಿ, ಸ್ಥಳದಿಂದ ಹೋಗಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಾಲಕ, "ನಾನು ಅದನ್ನು ನೋಡಿದ ಬಳಿಕ ಆಹಾರವನ್ನು ಎಸೆಯಲು ಬಯಸಿದೆ. ಇದು ಅಸಹ್ಯಕರವಾಗಿದೆ" ಎಂದು ಹೇಳಿದ್ದಾರೆ. ವಿಡಿಯೋ ನೋಡಿದ ಡೆಲಿವರಿ ಕಂಪನಿಯು, ಆ ವ್ಯಕ್ತಿಯನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿ ತಿಳಿಸಿದೆ,(ಏಜೆನ್ಸೀಸ್).