

ನವದೆಹಲಿ: ಉತ್ತರಾಖಂಡ, ಹರಿಯಾಣ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಗಂಗಾ, ಯಮುನಾ ಇನ್ನಿತರ ಪ್ರಮುಖ ನದಿಗಳು ಉಕ್ಕಿಹರಿಯುತ್ತಿವೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಪ್ರವಾಹ ಸ್ಥಿತಿ ನಿರ್ವಣವಾಗಿದೆ. ಯಮುನಾ ನದಿಯ ಜಲಾನಯನ ಪ್ರದೇಶದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ನದಿಯ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ. ಪ್ರಸ್ತುತ ಯಮುನಾ ನದಿಯಲ್ಲಿ 205.33 ಮೀಟರ್ ನಷ್ಟು ನೀರು ಹರಿಯುತ್ತಿದೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್ನಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಮುಂದಿನ 24 ರಿಂದ 48 ಗಂಟೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುವ ನಿರೀಕ್ಷೆ ಇದ್ದು, ದೆಹಲಿಯ ಹಲವು ಪ್ರದೇಶಗಳು ಮುಳುಗಡೆಯಾಗುವ ಸಾಧ್ಯತೆ ಇದೆ ಎಂದು ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಜುಲೈ ತಿಂಗಳಿನಲ್ಲಿ 285 ಮಿ.ಮೀ. ಮಳೆಯಾಗಿದೆ. ಇದು ಕಳೆದ 69 ವರ್ಷಗಳಲ್ಲೇ ದಾಖಲೆ ಮಳೆಯಾಗಿದೆ. ಇದಕ್ಕೂ ಮುನ್ನ 1956 ರಲ್ಲಿ ಜುಲೈ ತಿಂಗಳಿನಲ್ಲಿ 308 ಮಿ.ಮೀ. ಮಳೆಯಾಗಿತ್ತು. ಆಗಸ್ಟ್ ತಿಂಗಳಿನಲ್ಲೂ ಭಾರಿ ಮಳೆ ಮುಂದುವರೆದಿದ್ದು, 6 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿರುವ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಚುರು ಜಿಲ್ಲೆಯ ತಾರಾನಗರ ಪ್ರದೇಶ ಪ್ರವಾಹದಿಂದಾಗಿ ತೀವ್ರ ಹಾನಿಗೊಳಗಾಗಿದೆ. ಇಡೀ ಪಟ್ಟಣ ನೀರಿನಲ್ಲಿ ಮುಳುಗಡೆಯಾಗಿದೆ. ಜೈಪುರ, ಅಜ್ಮೇರ್, ಕೋಟಾ, ಭರತ್ಪುರ ಮತ್ತು ಬಿಕಾನೇರ್ ಡಿವಿಷನ್ಗಳಲ್ಲಿ ಆಗಸ್ಟ್ ನಲ್ಲಿ ಸಾಮಾನ್ಯ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಗಂಗಾ, ಯಮುನಾ, ಸರಯು, ಕೆನ್ ಮತ್ತು ಚಂಬಲ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರಯಾಗ್ರಾಜ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನದಿ ನೀರು ನುಗ್ಗಿದ್ದು ಪ್ರವಾಹ ಪರಿಸ್ಥಿತಿ ನಿರ್ವಣವಾಗಿದೆ. ಪ್ರಯಾಗ್ರಾಜ್ ನ ತಗ್ಗು ಪ್ರದೇಶಗಳಿಗೆ ಗಂಗೆ, ಯಮುನಾ ನದಿ ನೀರು ನುಗ್ಗಿದೆ. ವಾರಾಣಸಿಯಲ್ಲಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಹಲವು ಘಾಟ್ಗಳು ಮುಳುಗಡೆಯಾಗಿವೆ. ಅಯೋಧ್ಯೆ, ಬಂದಾ ಮತ್ತು ಇಟಾವಾದಲ್ಲಿ ಪ್ರವಾಹ ಉಂಟಾಗಿದ್ದು, ಎಸ್ಟಿಆರ್ಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ದೋಣಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.