ಫ್ರಾನ್ಸ್​, ಅಮೆರಿಕಕ್ಕೆ ವಿಮಾನ ಸಂಚಾರ ಪುನರಾರಂಭ

NN1
Published on

ನವದೆಹಲಿ: ಕೋವಿಡ್-19 ಪಿಡುಗಿನ ನಿಯಂತ್ರಣಕ್ಕೆ ಸ್ಥಗಿತಗೊಳಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ಫ್ರಾನ್ಸ್ ಮತ್ತು ಅಮೆರಿಕಕ್ಕೆ ಶುಕ್ರವಾರ ವಿಮಾನಗಳು ಪ್ರಯಾಣಿಸಲಿವೆ.

ವಿಮಾನಗಳ ಸಂಚಾರಕ್ಕೆ ಫ್ರಾನ್ಸ್ ಮತ್ತು ಅಮೆರಿಕದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್​ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ.

ಬ್ರಿಟನ್ ಮತ್ತು ಜರ್ಮನಿ ನಡುವೆ ಕೂಡ ಇದೇ ರೀತಿಯ ಒಪ್ಪಂದವನ್ನು ಶೀಘ್ರವೇ ಮಾಡಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ. ದೀಪಾವಳಿಯ ಹೊತ್ತಿಗೆ ದೇಶೀಯ ವಿಮಾನ ಸಂಚಾರದಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಶೇ. 60ಕ್ಕೆ ಹೆಚ್ಚಿಸಲಾಗುವುದು ಎಂದಿದ್ದಾರೆ. ಅಮೆರಿಕದ ವಿಮಾನ ಯಾನ ಸಂಸ್ಥೆ ಯುನೈಟೆಡ್ ಏರ್​ಲೈನ್ಸ್ ಶುಕ್ರವಾರದಿಂದ ಜುಲೈ 31ರ ವರೆಗೆ 18 ವಿಮಾನಗಳ ಹಾರಾಟ ನಡೆಸಲಿದೆ. ಪ್ರತಿದಿನ ದೆಹಲಿ ಮತ್ತು ನ್ಯೂಯಾರ್ಕ್ ನಡುವೆ ಪ್ರಯಾಣಿಸಲಿವೆ. ದೆಹಲಿ ಮತ್ತು ಸ್ಯಾನ್​ಫ್ರಾನ್ಸಿಸ್ಕೊ ಮಧ್ಯೆ ವಾರದಲ್ಲಿ ಮೂರು ದಿನ ಪ್ರಯಾಣಿಕರನ್ನು ಕರೆದೊಯ್ಯಲಿವೆ. ಏರ್ ಫ್ರಾನ್ಸ್ ಆಗಸ್ಟ್ 1ರವರೆಗೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಪ್ಯಾರಿಸ್ ನಡುವೆ 28 ವಿಮಾನಗಳ ಸಂಚಾರ ನಡೆಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net