ವಿಮಾನ ಲ್ಯಾಂಡ್ ಆಗಲು ವಿಳಂಬ

airport
ಶಿವಮೊಗ್ಗ ವಿಮಾನ ನಿಲ್ದಾಣ
Published on

ಶಿವಮೊಗ್ಗ: ಪ್ರತಿಕೂಲ ಹವಾಮಾನದಿಂದ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನ ಲ್ಯಾಂಡ್ ಆಗಲು ಬುಧವಾರ ವಿಳಂಬವಾಯಿತು. ಮೋಡ ಮುಸುಕಿದ ವಾತಾವರಣವಿದ್ದ ಕಾರಣ ರನ್‌ವೇ ಸರಿಯಾಗಿ ಕಾಣಲಿಲ್ಲ. ಹೀಗಾಗಿ ಪೈಲೆಟ್ ವಿಮಾನ ಇಳಿಸಲು 20 ನಿಮಿಷ ಸಾಧ್ಯವಾಗಲೇ ಇಲ್ಲ. ಹೀಗಾಗಿ ಮೂವರು ಸಚಿವರು, ಹಿರಿಯ ಅಧಿಕಾರಿಗಳು ಅರ್ಧ ತಾಸು ಹೆಚ್ಚುವರಿಯಾಗಿ ಏರ್‌ಪೋರ್ಟ್‌ನಲ್ಲೇ ಕಾಯಬೇಕಾಯಿತು.

ಸಚಿವರಾದ ಮಧು ಬಂಗಾರಪ್ಪ, ಡಾ.ಶರಣಪ್ರಕಾಶ್ ಪಾಟೀಲ್, ಡಾ.ಎಂ.ಸಿ.ಸುಧಾಕರ್, ಹಿರಿಯ ಐಎಎಸ್ ಅಧಿಕಾರಿಗಳಾದ ಉಮಾ ಮಹದೇವನ್, ಡಾ.ಆರ್.ರಾಗಪ್ರಿಯಾ ಬೆಂಗಳೂರಿಗೆ ತೆರಳಲು ಏರ್‌ಪೋರ್ಟ್‌ಗೆ ಆಗಮಿಸಿದ್ದರು. ವಿಮಾನ ಲ್ಯಾಂಡ್ ಆಗುವುದೇ 20 ನಿಮಿಷ ತಡವಾದ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುವ ವಿಮಾನ ಅರ್ಧ ತಾಸು ತಡವಾಗಿ ಟೇಕಾಫ್ ಆಯಿತು.
ಈಗಾಗಲೇ ಮೂರ‌್ನಾಲ್ಕು ಬಾರಿ ಪ್ರತಿಕೂಲ ಹವಾಮಾನದಿಂದ ವಿಮಾನದ ಲ್ಯಾಂಡಿಂಗ್ ಹಾಗೂ ಟೇಕಾಫ್‌ಗೆ ಸಮಸ್ಯೆಯಾಗಿದೆ. ಎತ್ತರದಿಂದ ರನ್‌ವೇ ಸರಿಯಾಗಿ ಕಾಣದ ಕಾರಣ ಒಂದು ಬಾರಿ ವಿಮಾನವನ್ನು ಲ್ಯಾಂಡ್ ಮಾಡದೇ ಬೆಂಗಳೂರಿಗೆ ಮರಳಿ ಕೊಂಡೊಯ್ಯಲಾಗಿತ್ತು. ಕೆಲವು ತಾಂತ್ರಿಕ ಉಪಕರಣಗಳನ್ನು ಏರ್‌ಪೋರ್ಟ್‌ನಲ್ಲಿ ಅಳವಡಿಸುವವರೆಗೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ.
ವಿಮಾನ ಸಂಚಾರದ ಸಮಯ ಬದಲು:ಬೆಂಗಳೂರು-ಶಿವಮೊಗ್ಗ-ಬೆಂಗಳೂರು ನಡುವಿನ ಇಂಡಿಗೋ ವಿಮಾನ ಸಂಚಾರದ ಸಮಯ ಜ.1ರಿಂದ ಬದಲಾವಣೆಯಾಗಿದೆ. ಆ.11 ರಿಂದ ಆರಂಭಗೊಂಡಿದ್ದ ಈ ಸೇವೆ ಪ್ರಕಾರ ಬೆಳಗ್ಗೆ 10.50ಕ್ಕೆ ಬೆಂಗಳೂರಿನಿಂದ ವಿಮಾನ ಆಗಮಿಸುತ್ತಿತ್ತು. ಇಲ್ಲಿಂದ 11.20ಕ್ಕೆ ಬೆಂಗಳೂರಿಗೆ ಟೇಕಾಫ್ ಆಗುತ್ತಿತ್ತು. ಆದರೆ ಜ.1ರಿಂದ ವೇಳಾಪಟ್ಟಿ ಬದಲಿಸಲಾಗಿದೆ. ಮಧ್ಯಾಹ್ನ 1.05ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ 2.20ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ. ಇಲ್ಲಿಂದ ಮಧ್ಯಾಹ್ನ 2.40ಕ್ಕೆ ಟೇಕಾಫ್ ಆಗುವ ವಿಮಾನ 3.50ಕ್ಕೆ ಬೆಂಗಳೂರು ತಲುಪಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net