

ಇಂದೋರ್: ತಳ್ಳುಗಾಡಿಯಲ್ಲಿ ತರಕಾರಿ, ಮೊಟ್ಟೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ 14 ವರ್ಷದ ಬಾಲಕ 100 ರೂಪಾಯಿ ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಇಂದೋರ್ನ ಮಹಾನಗರ ಪಾಲಿಕೆಯ ಸಿಬ್ಬಂದಿ ಗಡಿಯನ್ನು ಪಲ್ಟಿ ಮಾಡಿರುವ ಘಟನೆ ಮೊನ್ನೆಯಷ್ಟೇ ನಡೆದಿತ್ತು. ಇದರಿಂದಾಗಿ ಗಾಡಿಯಲ್ಲಿದ್ದ ಸಾವಿರಾರು ರೂಪಾಯಿ ಮೌಲ್ಯದ ಮೊಟ್ಟೆ, ತರಕಾರಿ ರಸ್ತೆ ಪಾಲಾಗಿದ್ದು ಬಾಲಕ ಪರಾಸ್ ರಾಯ್ಕರ್ನ ಸಂಕಷ್ಟ ನೋಡಲಾಗುತ್ತಿರಲಿಲ್ಲ.
ಈ ಬಗ್ಗೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದು, ಅದು ವೈರಲ್ ಆಗುತ್ತಿದ್ದಂತೆಯೇ ಬಾಲಕನ ಅದೃಷ್ಟ ಖುಲಾಯಿಸಿದೆ. ಆತನಿಗಾಗಿರುವ ಹಾನಿಗೆ ಮನನೊಂದಿರುವ ಸಹಸ್ರಾರು ಮಂದಿ, ನೆರವಿನ ಮಹಾಪೂರವನ್ನೇ ಹರಿಸಿದ್ದಾರೆ.
ಅಷ್ಟೇ ಅಲ್ಲದೇ, ಇಂದೋರ್ನ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಅವರು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಕುಟುಂಬಕ್ಕೆ ಒಂದು ಮನೆಯನ್ನು ಮಂಜೂರು ಮಾಡಿದ್ದರೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರು ಪರಾಸ್ ಮತ್ತು ಆತನ ಒಡಹುಟ್ಟಿದವರ ಶೈಕ್ಷಣಿಕ ವೆಚ್ಚವನ್ನು ನೋಡಿಕೊಳ್ಳಲು ಮುಂದಾಗಿದ್ದಾರೆ. ಇಂದೋರ್ ಪ್ರೆಸ್ ಕ್ಲಬ್ ಕೂಡ ಹುಡುಗನಿಗೆ ಪಡಿತರ ಮತ್ತು ಹಣವನ್ನು ಒದಗಿಸಿದೆ.
ಬಾಲಕ ತಳ್ಳುಗಾಡಿಯಲ್ಲಿ ಹೋಗುತ್ತಿದ್ದಾಗ, ಸುಸ್ತಾಗಿ ಸುಧಾರಿಸಿಕೊಳ್ಳಲೆಂದು ರಸ್ತೆ ಬದಿ ಗಾಡಿ ನಿಲ್ಲಿಸಿಕೊಂಡು ನಿಂತಿದ್ದ.
ಕೋವಿಡ್ ಹಿನ್ನೆಲೆಯಲ್ಲಿ ಇಂದೋರ್ ಮಹಾನಗರಪಾಲಿಕೆ ಎಡ-ಬಲ ಪದ್ಧತಿ, ಅಂದರೆ ಒಂದು ದಿನ ರಸ್ತೆಯ ಎಡಗಡೆ ಇರುವ ಅಂಗಡಿಗಳು ತೆರೆದಿದ್ದರೆ, ಇನ್ನೊಂದು ದಿನ ಬಲಗಡೆ ಇರುವ ಅಂಗಡಿಗಳನ್ನು ತೆರೆದು ವ್ಯಾಪಾರ-ವಹಿವಾಟು ನಡೆಸುವ ಪದ್ಧತಿಯನ್ನು ಜಾರಿಗೊಳಿಸಿದೆ.
ಇದರಂತೆ ಶುಕ್ರವಾರ ಬಲ ಬದಿಯ ಅಂಗಡಿಗಳು ತೆರೆದು ವಹಿವಾಟು ಮಾಡಬಹುದಿತ್ತು. ಆದರೆ, ಬಾಲಕ ತನ್ನ ಗಾಡಿಯನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿಕೊಂಡಿದ್ದು ಪಾಲಿಕೆ ಸಿಬ್ಬಂದಿಯ ಕೆಂಗಣ್ಣಿಗೆ ಗುರಿಯಾಯಿತು. ತಕ್ಷಣವೇ ಬಾಲಕನ ಬಳಿ ಹೋದ ಅವರು 100 ರೂ. ಲಂಚ ಕೊಡು ಇಲ್ಲವೇ ಗಾಡಿ ತೆಗಿ ಎಂದು ಹೇಳಿದ್ದಾರೆ. ಗಾಡಿಯಲ್ಲಿ ವಸ್ತುಗಳು ಹೆಚ್ಚಾಗಿರುವುದರಿಂದ ಭಾರವಿದೆ.
ಸುಧಾರಿಸಿಕೊಳ್ಳುತ್ತಿದ್ದೇನೆ. ತೆಗೆಯುತ್ತೇನೆ ಎಂದು ಹೇಳಿದ್ದಲ್ಲದೆ, ಲಂಚ ಕೊಡಲು ನಿರಾಕರಿಸಿದ್ದಾನೆ. ಇಷ್ಟಕ್ಕೆ ಸಿಟ್ಟಾದ ಅವರು ಗಾಡಿಯನ್ನು ಮಗುಚಿ ಹಾಕಿ ಹೊರಟುಹೋಗಿದ್ದಾರೆ.
.ಗಾಡಿಯಲ್ಲಿದ್ದ ಮೊಟ್ಟೆಗಳೆಲ್ಲವೂ ಬಿದ್ದು ಒಡೆದು ಹೋಗಿತ್ತು. ಬಾಲಕನ ಆಕ್ರಂದನ ಮುಗಿಲುಮುಟ್ಟಿತ್ತು.
ಇದರ ವಿಡಿಯೋ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದಂತೆಯೇ ದೇಶಾದ್ಯಂತದ ಜನರು ಬಾಲಕನ ನೆರವಿಗೆ ಧಾವಿಸಿದ್ದಾರೆ. ಹಲವರು ನಗದು ಮತ್ತು ರೀತಿಯ ಸಹಾಯವನ್ನು ನೀಡಲು ಮುಂದಾಗಿದ್ದಾರೆ.
ಶಾಸಕ ರಮೇಶ್ ಮನೆಯ ಜತೆಗೆ, ಸೈಕಲ್ ಮತ್ತು 2,500 ರೂಗಳನ್ನು ಸಹ ನೀಡಿದ್ದಾರೆ. ದಿಗ್ವಿಜಯ ಸಿಂಗ್ 10 ಸಾವಿರ ರೂಪಾಯಿ ನೀಡಿದ್ದು ಶಿಕ್ಷಣದ ಭರವಸೆ ನೀಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.