

ಮೊಹಾಲಿ: ಅನುಭವಿ ವೇಗಿ ಮೊಹಮದ್ ಶಮಿ (51ಕ್ಕೆ 5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಸ್ಫರ್ಧಾತ್ಮಕ ಮೊತ್ತಕ್ಕೆ ಕಟ್ಟಿಹಾಕಿದೆ.
ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸೀಸ್, ಡೇವಿಡ್ ವಾರ್ನರ್ (52 ರನ್, 53 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಬಲದಿಂದ 35.4 ಓವರ್‌ಗಳಲ್ಲಿ 4 ವಿಕೆಟ್‌ಗೆ 166 ರನ್‌ಗಳಿಸಿದಾಗ ಮಳೆಯಿಂದಾಗಿ ಆಟವನ್ನು 20 ನಿಮಿಷ ಸ್ಥಗಿತ ಮಾಡಲಾಗಿತ್ತು. ಪುನಃ ಯಾವುದೇ ಓವರ್ ಕಡಿತವಿಲ್ಲದೆ ಪಂದ್ಯ ಪುನರರಾಂಭಗೊಂಡಾಗ ಭರ್ತಿ50 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಯಿತು.
ಕಾಡಿದ ವಾರ್ನರ್-ಸ್ಮಿತ್: ತಂಡದ ಅನುಭವಿ ವೇಗಿ ಎನಿಸಿದರು ಹನ್ನೊಂದರ ಬಳಗದಲ್ಲಿ ಕಾಯಂ ಸ್ಥಾನ ಪಡೆಯುವಲ್ಲಿ ವಿಲವಾಗಿರುವ ಮೊಹಮದ್ ಶಮಿ ಮೊದಲ ಓವರ್‌ನಲ್ಲಿ ಮಿಚೆಲ್ ಮಾರ್ಷ್ (0) ವಿಕೆಟ್ ಕಬಳಿಸಿ ಪ್ರವಾಸಿಗರಿಗೆ ಶಾಕ್ ನೀಡಿದರು. ಬಳಿಕ ಜತೆಯಾದ ಅನುಭವಿ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ (41) ತಂಡಕ್ಕೆ ಆಸರೆಯಾಗಿ ನಿಂತರು. ಇವರಿಬ್ಬರೂ ಎರಡನೇ ವಿಕೆಟ್‌ಗೆ 94 ರನ್ ಪೇರಿಸಿದರು. ವಾರ್ನರ್ ವೈಯಕ್ತಿಕ 14 ರನ್ ಗಳಿಸಿದಾಗ ಶ್ರೇಯಸ್ ಅಯ್ಯರ್ ಸುಲಭವಾದ ಕ್ಯಾಚ್ ಚೆಲ್ಲಿದರು. ಇದರ ಲಾಭ ಪಡೆದ ವಾರ್ನರ್ ಅರ್ಧಶತಕ ಬಾರಿಸಿದರು. ಈ ಜೋಡಿಗೆ 19ನೇ ಓವರ್‌ನಲ್ಲಿ ಜಡೇಜಾ ಬ್ರೇಕ್ ಹಾಕಿದರು.
ಶೈನ್ ಆದ ಶಮಿ: ಮೂರನೇ ವಿಕೆಟ್‌ಗ ಜತೆಯಾದ ಸ್ಮಿತ್ ಹಾಗೂ ಮಾರ್ನಸ್ ಲಬುಶೇನ್ (39) ಭಾರತಕ್ಕೆ ಸವಾಲೆನಿಸುವ ಮುನ್ನವೆ ಎರಡನೇ ಸ್ಪೆಲ್ ಆರಂಭಿಸಿದ ಶಮಿ, ಸ್ಮಿತ್ ವಿಕೆಟ್ ಕಬಳಿಸಿದರು. ಲಬುಶೇನ್ ಹಾಗೂ ಕ್ಯಾಮರಾನ್ ಗ್ರೀನ್ (31) ಇಬ್ಬರೂ ಭಾರತೀಯ ಬೌಲರ್‌ಗಳ ಎದುರು ಉಪಯುಕ್ತ ರನ್ ಕಲೆಹಾಕಿದರು. ಆಶ್ವಿನ್ ಈ ಜೋಡಿಗೆ ಕಡಿವಾಣ ಹಾಕಿದರು. ಲಬುಶೇನ್ ಔಟ್ ಆದ ಬೆನ್ನಲೇ ಗ್ರೀನ್ ರನೌಟ್‌ಗೆ ಬಲಿಯಾದರು. ವಿಕೆಟ್ ಕೀಪರ್-ಬ್ಯಾಟರ್ ಜೋಸ್ ಇಂಗ್ಲೀಸ್ (45) ಹಾಗೂ ಮಾರ್ಕಸ್ ಸ್ಟೋಯಿನಿಸ್ (29) ಆರನೇ ವಿಕೆಟ್‌ಗೆ 62 ರನ್ ಪೇರಿಸಿ 250ರ ಗಡಿ ದಾಟಿಸಿದರು. ಸ್ಲಾಗ್ ಓವರ್‌ಗಳಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಆಸೀಸ್ ಬ್ಯಾಟರ್‌ಗಳಿಗೆ ಸಂಪೂರ್ಣ ಕಡಿವಾಣ ಹೇರಿದರು. ಮ್ಯಾಥ್ಯೂ ಶಾರ್ಟ್ (2), ಸೀನ್ ಅಬೋಟ್ (2) ವಿಕೆಟ್ ಪಡೆದ ಶಮಿ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಐದು ವಿಕೆಟ್ ಗೊಂಚಲು ಪಡೆದುಕೊಂಡರು. ಜಸ್‌ಪ್ರೀತ್ ಬುಮ್ರಾ ಸಂಪೂರ್ಣವಾಗಿ 10 ಓವರ್ ಬೌಲಿಂಗ್ ನಡೆಸಿದರು.