

ರಾಯಚೂರು: ಮನುಷ್ಯನ ಬದುಕನ್ನು ಸುಸೂತ್ರವಾಗಿ ನಡೆಸಲು ಬಸವಣ್ಣನವರ ವಚನಗಳು ಸೂತ್ರ ಪ್ರಧಾನವಾಗಿದ್ದು, ವಚನಗಳಲ್ಲಿ ಸಾರವನ್ನು ಅರಿತುಕೊಂಡು ನಡೆದರೆ ಮಾತ್ರ ಬದುಕು ಸಾರ್ಥಕವಾಗಲಿದೆ ಎಂದು ಹಿರಿಯ ಪತ್ರಕರ್ತ ಬಸವರಾಜಸ್ವಾಮಿ ಹೇಳಿದರು.
ಸ್ಥಳೀಯ ರಾಯಚೂರು ವಿಶ್ವವಿದ್ಯಾಲಯದಲ್ಲಿ ಬಸವ ಜಯಂತಿ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಬಸವಾದಿ ಶರಣರ ವಚನಗಳು, ದಾಸರ ಕೀರ್ತನೆಗಳು, ತತ್ತ್ವಪದಗಳಲ್ಲಿ ಅಜ್ಞಾನವನ್ನು ಹೋಗಲಾಡಿಸುವ ಸೂತ್ರಗಳಿವೆ ಎಂದರು. ಪ್ರಾಧ್ಯಾಪಕರು ವಚನ ಮತ್ತು ಕೀರ್ತನೆಗಳನ್ನು ಅವಲೋಕಿಸಿ ಆಯಾ ಸೂತ್ರಗಳ ಮೂಲಕ ಬೋಧಿಸಿದರೆ ವಿದ್ಯಾರ್ಥಿಗಳ ಅಜ್ಞಾನಕ್ಕೆ ದಿವ್ಯ ಔಷಧವಾಗುವುದರಲ್ಲಿ ಸಂದೇಶವಿಲ್ಲ. ಪಂಚೇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಯರ‌್ರಿಸ್ವಾಮಿ ಮಾತನಾಡಿ, ವಿಶ್ವಕ್ಕೆ ಸಮಾನತೆಯ ಸಮಾಜದ ಕನಸನ್ನು ಕಟ್ಟಿಕೊಟ್ಟ ಕೀರ್ತಿ 12ನೇ ಶತಮಾನದ ಶರಣರಿಗೆ ಸಲ್ಲುತ್ತದೆ. ಅಂತಹ ಮಹನೀಯರ ಆದರ್ಶ, ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಸಚಿವ ಪ್ರೊ.ಎಂ.ವಿಶ್ವನಾಥ ಮಾತನಾಡಿ, ಬಸವಣ್ಣನವರ ವಚನಗಳು ಜೀವನದ ಪಾಠ ಕಲಿಸುವ ಭಂಡಾರವಿದ್ದಂತೆ. ವಚನಗಳ ಸಾರವನ್ನು ಅರಿತಾಗ ಮಾತ್ರ ಜೀವನದ ಸಂಕೀರ್ಣತೆಯಿಂದ ಹೊರಬರಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಪ್ರಾಧ್ಯಾಪಕ ಡಾ.ನಾಗರಾಜ ವಚನ ಕ್ರಾಂತಿಯ ಕುರಿತು, ಆಕಾಶವಾಣಿ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಭಾರತೀಯ ತತ್ತ್ವ ಚಿಂತನೆ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪ ಕುಲಸಚಿವ ಡಾ.ಜಿ.ಎಸ್.ಬಿರಾದರ್, ಪ್ರಾಧ್ಯಾಪಕರಾದ ಪ್ರೊ.ಸಿ.ಎಸ್.ಪಾರ್ವತಿ, ಮಧುಸೂದನ್, ಅನಿಲ್ ಅಪ್ರಾಳ, ಡಾ.ರಶ್ಮಿರಾಣಿ ಅಗ್ನಿಹೋತ್ರಿ, ಡಾ.ಗೀತಮ್ಮ, ಪ್ರೊ.ನುಸ್ರತ್ ಫಾತಿಮಾ, ಪ್ರೊ.ಪಿ.ಭಾಸ್ಕರ್ ಉಪಸ್ಥಿತರಿದ್ದರು.