

ಸೋಮವಾರಪೇಟೆ : ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಓದುಗರಿಗೆ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಸೋಮವಾರಪೇಟೆ ತಾಲೂಕಿನ ಐವರು ವಿಜೇತರನ್ನು ಗುರುವಾರ ಲಕ್ಕಿಡಿಪ್ ಮೂಲಕ ಆಯ್ಕೆ ಮಾಡಲಾಯಿತು.
ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ತಿಲೋತ್ತಮೆ ನಂದಕುಮಾರ್, ಸೋಮವಾರಪೇಟೆ ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಸುಮನಾ ಮ್ಯಾಥ್ಯು, ಸಮಾಜ ಸೇವಕಿ ಎಂ.ಎ.ರುಬಿನಾ ಲಕ್ಕಿ ಡಿಪ್ ಮೂಲಕ ವಿಜೇತರನ್ನು ಆಯ್ಕೆ ಮಾಡಿದರು.
ನಿವೃತ್ತ ಪ್ರಾಂಶುಪಾಲೆ ತಿಲೋತ್ತಮೆ ನಂದಕುಮಾರ್ ಮಾತನಾಡಿ, ಮಹಿಳೆಯರಲ್ಲಿ ಓದುವ ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಮನೆಯಲ್ಲಿ ಪತ್ರಿಕೆಗಳು ಟೇಬಲ್ ಮೇಲೆ ಇದ್ದರೆ, ಮಕ್ಕಳು ಹಿರಿಯರು ಎಲ್ಲರೂ ಓದುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉನ್ನತ ಮಟ್ಟದ ಪರೀಕ್ಷೆಗಳನ್ನು ಬರೆಯುವುದಕ್ಕೆ ಸಾಮಾನ್ಯ ಜ್ಞಾನ ಇರಲೇಬೇಕು. ವಿದ್ಯಾರ್ಥಿಗಳು ನಿರಂತರ ಪತ್ರಿಕೆಗಳನ್ನು ಓದಬೇಕು ಎಂದು ಕಿವಿಮಾತು ಹೇಳಿದರು.
ಮಾಧ್ಯಮಗಳು ಸಮಾಜದಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡಬೇಕಾಗಿದೆ. ಪಾಕಿಸ್ತಾನದೊಂದಿಗೆ ಕದನ ವಿರಾಮ ಘೋಷಿಸಿರುವುದು ಅತ್ಯಂತ ಸಮಂಜಸವಾದುದು. ಯುದ್ಧದ ಭೀಕರತೆಯನ್ನು ಭಾರತ ಅರ್ಥ ಮಾಡಿಕೊಂಡಿರುವುದು ಒಳ್ಳೆಯ ನಿರ್ಧಾರವಾಗಿದೆ. ಇಲ್ಲದಿದ್ದರೆ ಮೂರನೆ ಮಹಾಯುದ್ಧ ಘಟಿಸುವ ಸಂದರ್ಭವೂ ಇತ್ತು ಎಂದು ಅಭಿಪ್ರಾಯಪಟ್ಟರು.
ಮುದ್ರಣ ಮಾಧ್ಯಮ ಮಾತ್ರ ನಿಖರ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಅತಿಥಿ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ವಿದೇಶಕ್ಕೆ ಹೋಲಿಸಿಕೊಂಡರೆ ನಮ್ಮ ದೇಶದಲ್ಲಿ ದಿನಪತ್ರಿಕೆಗಳು ಸುಲಭದಲ್ಲಿ ಅತಿ ಕಡಿಮೆ ದರದಲ್ಲಿ ಬೆಳಗಿನ ಜಾವ ಮನೆ ಬಾಗಿಲಿಗೆ ತಲುಪುತ್ತಿವೆ. ಇದು ನಮ್ಮ ದೇಶದ ಪತ್ರಿಕಾರಂಗದ ಸಾಧನೆ ಎಂದು ಹೇಳಿದರು.
ಸುಮನ ಮ್ಯಾಥ್ಯು ಮಾತನಾಡಿ, ವಿಜಯವಾಣಿಯ ಹೊಸ ಹೊಸ ಕಾಲಂಗಳು, ನಾರಿ ನಿನಗೊಂದು ಸ್ಯಾರಿ, ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ವಿದ್ಯಾರ್ಥಿ ಮಿತ್ರ ಹೀಗೆ ಮಕ್ಕಳಿಂದ ಹಿಡಿದು ಎಲ್ಲ ವರ್ಗದ ಓದುಗರನ್ನು ತಲುಪುವ ಪ್ರಯತ್ನ ನಮ್ಮಂತಹ ಓದುಗರಿಗೂ ಇಷ್ಟವಾಗುತ್ತದೆ ಎಂದು ಹೇಳಿದರು.
ಭಾರತ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡದ ಸಂದರ್ಭ ಮುದ್ರಣ ಮಾಧ್ಯಮ ನೈತಿಕವಾಗಿ ಕೆಲಸ ಮಾಡಿದೆ. ಆದರೆ ಸಾಮಾಜಿಕ ಜಾಲತಾಣಗಳು ಒಂದಷ್ಟು ಪ್ರಚೋದನೆಯ ಸುದ್ದಿಗಳನ್ನು ಪ್ರಕಟಿಸಿವೆ. ಟಿಆರ್‌ಪಿಗಾಗಿ ಒಂದಷ್ಟು ಮಾಧ್ಯಮಗಳು ಪ್ರಯತ್ನಪಟ್ಟಿವೆ. ಸೈನಿಕರು, ಮಕ್ಕಳು, ಮಹಿಳೆಯರು ಯುದ್ಧಬಾಧಿತರಲ್ಲಿ ಮೊದಲ ಸ್ಥಾನದಲ್ಲಿರುತ್ತಾರೆ. ಕೇಂದ್ರ ಸರ್ಕಾರದ ಸಂಯಮವನ್ನು ಮಹಿಳೆಯರಾಗಿ ನಾವೆಲ್ಲರೂ ಗೌರವಿಸಬೇಕು ಎಂದರು. ವಿಜಯವಾಣಿ ಪತ್ರಿಕಾರಂಗದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲಿ ಎಂದು ಹಾರೈಸಿದರು.
ಸೀರೆ ಗೆದ್ದವರು : ಎಂ.ಎಂ, ಮಮತಾ, ಕರ್ಕಳ್ಳಿ ಗ್ರಾಮ, ಸೋಮವಾರಪೇಟೆ, ಕೆ.ಪಿ.ಸುಜಾತಾ, ಟೈಲರ್, ಗರಗಂದೂರು ಬಿ ಗ್ರಾಮ, ಸೋಮವಾರಪೇಟೆ ತಾಲೂಕು, ಎಸ್.ವಿ.ಭಾರತಿ, ಶಿಕ್ಷಕಿ, ತ್ಯಾಗರಾಜ ಕಾಲನಿ, ಶನಿವಾರಸಂತೆ, ಸಿ.ಎಸ್.ಹರಿಣಿ, ಗೃಹಿಣಿ, ಗೋಪಾಲಪುರ ಗ್ರಾಮ, ಸೋಮವಾರಪೇಟೆ ತಾಲೂಕು, ಕೆ.ಆರ್.ಕೌಶಿಕ್, ವಿದ್ಯಾರ್ಥಿ, ಗರಗಂದೂರು ಗ್ರಾಮ, ಸೋಮವಾರಪೇಟೆ ತಾಲೂಕು.